ತುಮಕೂರು: ಕೋವಿಡ್-19 ಹೋಗಲಾಡಿಸಲು ರಾಜ್ಯ ಸರ್ಕಾರ ಹೋರಾಡುತ್ತಿದೆ. ಆದರೆ ಜಾತಿ ಅಸ್ಪೃಶ್ಯತೆಯನ್ನು ಹೋಗಲಾಡಿಸಲು ಯಾವುದೇ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂದು ದಲಿತ ಹಕ್ಕುಗಳ ಸಮಿತಿಯ ರಾಜ್ಯ ಸಂಚಾಲಕ ಗೋಪಾಲಕೃಷ್ಣ ಹರಳಹಳ್ಳಿ ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ದೌರ್ಜನ್ಯಕ್ಕೆ ಒಳಗಾದ ದಲಿತರಿಗೆ ನ್ಯಾಯ ಸಿಗಬೇಕು, ಪೊಲೀಸರಿಂದ ದಲಿತರಿಗೆ ರಕ್ಷಣೆ ಸಿಗಬೇಕು, ದಲಿತರ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಕಾನೂನು ರೀತಿಯ ಕಠಿಣ ಶಿಕ್ಷೆ ನೀಡಬೇಕು ಮತ್ತು ನೊಂದ ದಲಿತರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿ ದಲಿತ ಹಕ್ಕುಗಳ ಸಮಿತಿಯಿಂದ ಪ್ರತಿಭಟನೆ ನಡೆಯಿತು.
ದಲಿತ ಹಕ್ಕುಗಳ ಸಮಿತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ದಲಿತರ ಮೇಲಿನ ದೌರ್ಜನ್ಯಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಜೊತೆಗೆ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ ಘಟನೆಗಳು ನಡೆದಿವೆ. ಹೀಗಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ದೌರ್ಜನ್ಯ ತಡೆ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕು, ಅಲ್ಲದೇ ದಲಿತರ ಮೇಲೆ ದೌರ್ಜನ್ಯ ಎಸಗುವವರನ್ನು ಬಂಧಿಸಿ ಕಠಿಣ ಶಿಕ್ಷೆಗೊಳಪಡಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಗೋಪಾಲಕೃಷ್ಣ ಹರಳಹಳ್ಳಿ ಮಾತನಾಡಿ, ಜಿಲ್ಲೆಯಲ್ಲಿ ದಲಿತರ ಮೇಲೆ ಹಲ್ಲೆ ನಡೆದಂತಹ ಸಮಯದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿ ಮಾಡಿ ದೂರು ನೀಡಲಾಗಿದೆ. ಆದರೆ ಪೊಲೀಸ್ ಇಲಾಖೆಯ ಅಧಿಕಾರಿಗಳು ಮೇಲ್ಜಾತಿಯ ದೌರ್ಜನ್ಯವನ್ನು ಮಾಡಿದಂತಹ ವ್ಯಕ್ತಿಗಳ ಪರವಾಗಿ ನಿಂತಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಾಣುತ್ತದೆ ಎಂದು ಆರೋಪಿಸಿದರು.