ತುಮಕೂರು: ಶಾಸಕರು ಕತ್ತೆಗಳ ರೀತಿಯಲ್ಲಿ ಹರಾಜಾಗುತ್ತಿರುವುದರಿಂದ ರಾಷ್ಟ್ರಮಟ್ಟದಲ್ಲಿ ರಾಜ್ಯದ ಮರ್ಯಾದೆ ಹಾಳಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಛೀ ಥೂ ಉಗಿಯುವ ಚಳುವಳಿ ನಡೆಯಿತು.
ನಗರದ ಟೌನ್ ಹಾಲ್ ವೃತ್ತದಲ್ಲಿ ಜಮಾಯಿಸಿದ ರೈತರು ರಾಜಕಾರಣಿಗಳ ಭಾವಚಿತ್ರಕ್ಕೆ ಉಗಿಯುವ ಮೂಲಕ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಆನಂದ್ ಪಾಟೇಲ್ ಮಾತನಾಡಿ, ರಾಜ್ಯದಲ್ಲಿ ಬರಗಾಲ ತಾಂಡವವಾಡುತ್ತಿದೆ. ರೈತರು ಅನೇಕ ಸಮಸ್ಯೆಗಳಿಗೆ ತುತ್ತಾಗಿ ಆತ್ಮಹತ್ಯೆಯ ಹಾದಿ ತುಳಿಯುತ್ತಿದ್ದಾರೆ. ಮಳೆಯಿಲ್ಲದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಜನಪ್ರತಿನಿಧಿಗಳು ರೆಸಾರ್ಟ್ ರಾಜಕಾರಣ ಮಾಡುತ್ತಾ ರಾಜಕೀಯ ಅಸ್ಥಿರತೆ ಉಂಟುಮಾಡಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದ್ದಾರೆ. ಆದ್ದರಿಂದ ಜನಪ್ರತಿನಿಧಿಗಳ ವಿರುದ್ಧ ಛೀ ಥೂ ಎಂದು ಉಗಿಯುವ ಚಳುವಳಿಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಜನಪ್ರತಿನಿಧಿಗಳ ವಿರುದ್ಧ ಛೀ ಥೂ ಉಗಿಯುವ ಚಳುವಳಿ ಪ್ರತಿಭಟನೆಯಲ್ಲಿ ಅತೃಪ್ತ ಶಾಸಕರ ಭಾವಚಿತ್ರಗಳಿಗೆ ಉಗಿಯಲಾಯಿತು ಮತ್ತು ರೆಸಾರ್ಟ್ ರಾಜಕಾರಣ ಮಾಡುತ್ತಿರುವ ಮೂರು ಪಕ್ಷದ ರಾಜಕಾರಣಿಗಳನ್ನು ಹರಾಜು ಮಾಡಿದ ಪ್ರಸಂಗ ನಡೆಯಿತು.