ತುಮಕೂರು:ಇಲ್ಲಿನ ಅಂಬೇಡ್ಕರ್ ನಗರದಲ್ಲಿರುವ 6 ಎಕರೆ 19 ಗುಂಟೆ ಕರಾಬು ಜಾಗವನ್ನು ಕೊಳಚೆ ನಿರ್ಮೂಲನಾ ಮಂಡಳಿ 1973ರ ಅಧಿನಿಯಮ ಕಾಲಂ 17ರನ್ವಯ ಭೂ ಸ್ವಾಧೀನ ಪಡಿಸಿಕೊಳ್ಳುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಗೆ ಮನವಿ ಸಲ್ಲಿಸಿತು.
ಕರಾಬು ಜಾಗವನ್ನು ಸ್ವಾಧೀನ ಪಡಿಸಿಕೊಳ್ಳುವಂತೆ ಪ್ರತಿಭಟನೆ - ಕೊಳಚೆ ನಿರ್ಮೂಲನಾ ಮಂಡಳಿ
ತುಮಕೂರಿನ ಬಡಾವಣೆಯೊಂದರ ಕರಾಬು ಜಾಗವನ್ನು ಕೊಳಚೆ ನಿರ್ಮೂಲನಾ ಮಂಡಳಿ ಸ್ವಾಧೀನ ಪಡಿಸಿಕೊಳ್ಳಬೇಕೆಂದು ದಲಿತ ಸಂಘರ್ಷ ಸಮಿತಿ ಪ್ರತಿಭಟನೆ ನಡೆಸಿತು.
ಇಪ್ಪತ್ತನೇ ವಾರ್ಡ್ಗೆ ಸೇರುವ ಹನುಮಂತಪುರದ ಅಂಬೇಡ್ಕರ್ ನಗರದಲ್ಲಿ 1982ರಿಂದ ದಲಿತರು ವಾಸ ಮಾಡುವುದನ್ನು ಮನಗಂಡ ಜಿಲ್ಲಾಡಳಿತ ಹಾಗೂ ಅಂದಿನ ನಗರಸಭೆಯವರು, ಗುಡಿಸಲು ವಾಸಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ನಿವೇಶನಗಳಿಗೆ 1992ರಲ್ಲಿ ಹಕ್ಕುಪತ್ರಗಳನ್ನು ನೀಡಿದ್ದರು.
ಹಂತ ಹಂತವಾಗಿ ವಿದ್ಯುತ್, ಕುಡಿಯುವ ನೀರು, ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ ಹಾಗೂ ಶಿಶು ವಿಹಾರ ಇತ್ಯಾದಿ ಸೌಲಭ್ಯಗಳು ಬಂದವು. ಅಂಬೇಡ್ಕರ್ ನಗರವನ್ನು ನಿರ್ಮೂಲನ ಮಂಡಳಿ ಅಧಿನಿಯಮ ಪ್ರಕಾರ ಕೊಳಚೆ ಪ್ರದೇಶ ಎಂದು ಘೋಷಿಸಲಾಯಿತು. ಆನಂತರದಲ್ಲಿ ಕೊಳಚೆ ನಿರ್ಮೂಲನ ಮಂಡಳಿಯ ಬಡಾವಣೆಗೆ ರಸ್ತೆ ಚರಂಡಿ, ನೀರು ಸರಬರಾಜಿಗಾಗಿ ಕೊಳವೆ ಬಾವಿ ಹಾಗೂ ಒಳಚರಂಡಿ ಸೌಲಭ್ಯಗಳನ್ನು ಕಲ್ಪಿಸಲಾಗಿತ್ತು. ಹಾಗಾಗಿ ಈ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವಂತೆ ಒತ್ತಾಯಿಸಿ ಕೊಳಗೇರಿ ಅಭಿವೃದ್ಧಿ ಮಂಡಳಿಯ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.