ತುಮಕೂರು:ಗ್ರಾಮ ಪಂಚಾಯಿತಿಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯಯು ಡಿ. 30ರಂದು ಎಲ್ಲಾ ತಾಲೂಕು ಕೇಂದ್ರಗಳಲ್ಲಿ ನಡೆಯಲಿದ್ದು, ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮತ ಎಣಿಕಾ ಕೇಂದ್ರದಲ್ಲಿ ಸರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಎಣಿಕೆ ಕೇಂದ್ರದ ಸುತ್ತಮುತ್ತಲಿನ 500 ಮೀಟರ್ ವ್ಯಾಪ್ತಿಯಲ್ಲಿ ಡಿ. 30ರ ಬೆಳಗ್ಗೆ 6ರಿಂದ ಡಿ. 31ರ ಬೆಳಗ್ಗೆ 8 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ ಕೆ.ರಾಕೇಶ್ ಕುಮಾರ್ ಆದೇಶ ಹೊರಡಿಸಿದ್ದಾರೆ.
ಚುನಾವಣೆಯಲ್ಲಿ ಜಯ ಗಳಿಸಿದ ಅಭ್ಯರ್ಥಿಗಳು ವಿಜಯೋತ್ಸವ ಆಚರಿಸಲು, ಮೆರವಣಿಗೆ ಮೂಲಕ ಘೋಷಣೆಗಳನ್ನು ಕೂಗುವ ಹಾಗೂ ಪರಾಭವಗೊಂಡ ಅಭ್ಯರ್ಥಿಗಳ ಬೆಂಬಲಿಗರು ಮತ್ತು ಜಯ ಗಳಿಸಿದ ಅಭ್ಯರ್ಥಿಗಳ ಬೆಂಬಲಿಗರ ಮಧ್ಯೆ ಗಲಾಟೆ ಆಗುವ ಸಾಧ್ಯತೆಗಳು ಇರುವುದರಿಂದ ಈ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಇದನ್ನೂ ಓದಿ : ಈ ಬಾರಿ ಅದ್ಧೂರಿ ಹೊಸ ವರ್ಷಾಚರಣೆ ಇಲ್ಲ : ಬೆಂಗಳೂರಿನಲ್ಲಿ ಡಿ.31ರ ಸಂಜೆ 6ರಿಂದ ನಿಷೇಧಾಜ್ಞೆ
ನಿಷೇಧಾಜ್ಞೆ ಅವಧಿಯಲ್ಲಿ ಐದು ಜನ ಮೇಲ್ಪಟ್ಟು ಗುಂಪುಗಾರಿಕೆ ಮಾಡುವುದಾಗಲಿ ಇತರೆ ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸುವಂತಿಲ್ಲ. ಮೆರವಣಿಗೆ, ಅಕ್ರಮ ಗುಂಪು ಸೇರುವಿಕೆ, ಪಟಾಕಿ ಸಿಡಿಸುವಂತಿಲ್ಲ. ಯಾವುದೇ ರೀತಿಯ ಮತೀಯ ಭಾವನೆಗಳನ್ನು ಕೆರಳಿಸುವಂತಹ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವುದು, ಘೋಷಣೆ ಕೂಗುವುದು ಹಾಗೂ ಭಿತ್ತಿ ಪತ್ರಗಳನ್ನು ಪ್ರಕಟಿಸುವುದು ಮಾಡತಕ್ಕದ್ದಲ್ಲ.
ಶಾಂತಿ ಮತ್ತು ಸಾಮಾಜಿಕ ಸಾಮರಸ್ಯಕ್ಕೆ ಭಂಗವುಂಟುಮಾಡುವ ಸುಳ್ಳು ವದಂತಿಗಳನ್ನು ಹಬ್ಬಿಸಬಾರದು, ಸಾರ್ವಜನಿಕರ ಪ್ರಾಣ ಮತ್ತು ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ಹಾನಿ ಉಂಟಾಗುವ ರೀತಿಯಲ್ಲಿ ವರ್ತಿಸತಕ್ಕದ್ದಲ್ಲ. ನಿಷೇಧಾಜ್ಞೆ ಅವಧಿಯಲ್ಲಿ ಶವ ಸಂಸ್ಕಾರ, ಮದುವೆ ಮತ್ತು ಧಾರ್ಮಿಕ ಕಾರ್ಯ ಹೊರತುಪಡಿಸಿ ಯಾವುದೇ ಸಭೆ ಸಮಾರಂಭ ಮತ್ತು ಮೆರವಣಿಗೆ ಮಾಡುವಂತಿಲ್ಲ. ನಿಷೇಧಾಜ್ಞೆಯನ್ನು ಉಲ್ಲಂಘಿಸಿದ ವ್ಯಕ್ತಿಗಳನ್ನು ಕೂಡಲೇ ಬಂಧಿಸಿ ಅವರ ವಿರುದ್ಧ ಕಾನೂನು ಪ್ರಕಾರ ಕ್ರಮ ಜರುಗಿಸಲು ಪೊಲೀಸ್ ಇಲಾಖೆಗೆ ಆದೇಶಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.