ತುಮಕೂರು: ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಎದುರು ಖಾಸಗಿ ಡಿಪ್ಲೊಮಾ ಕಾಲೇಜುಗಳ ಬ್ಯಾನರ್ಗಳನ್ನು ಹಾಕಿ ವಿದ್ಯಾರ್ಥಿಗಳನ್ನು ಸೆಳೆದು ದಾಖಲಾತಿ ಹೆಚ್ಚಿಸಲು ಪೈಪೋಟಿ ನಡೆಯುತ್ತಿದೆ. ಜಿಲ್ಲೆಯಲ್ಲಿರುವ ಖಾಸಗಿ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ವಿದ್ಯಾರ್ಥಿಗಳು ದಾಖಲಾಗುತ್ತಿರುವ ಹಿನ್ನೆಲೆ ಖಾಸಗಿ ಕಾಲೇಜು ಸಿಬ್ಬಂದಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಮುಂಭಾಗ ಬ್ಯಾನರ್ಗಳನ್ನು ಹಾಕಿ ಕುಳಿತಿದ್ದಾರೆ. ಡಿಪ್ಲೊಮಾ ಸೇರ ಬಯಸುವ ವಿದ್ಯಾರ್ಥಿಗಳ ಮನವೊಲಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.
ಈಗಾಗಲೇ ತುಮಕೂರು ನಗರದಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಬಹುತೇಕ ದಾಖಲಾತಿ ಪ್ರಕ್ರಿಯೆ ಪೂರ್ಣಗೊಂಡಿದೆ. ಆದರೆ, ಇಲ್ಲಿ ಸೀಟು ಸಿಗದ ವಿದ್ಯಾರ್ಥಿಗಳು ಖಾಸಗಿ ಡಿಪ್ಲೊಮಾ ಕಾಲೇಜುಗಳಲ್ಲಿ ಸೇರಬಹುದು ಎಂದು ಅವರಿಗೆ ಮಾಹಿತಿ ನೀಡುತ್ತಿದ್ದಾರೆ. ಹೀಗಾಗಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಮುಂಭಾಗ ಹಾಗೂ ಕಾಲೇಜಿಗೆ ಹೊಂದಿಕೊಂಡಂತೆ ಇರುವ ಫುಟ್ಬಾತ್ನಲ್ಲಿ ಖಾಸಗಿ ಕಾಲೇಜುಗಳ ಬ್ಯಾನರ್ಗಳನ್ನು ಹಾಕಲಾಗಿದೆ. ಈ ಮೂಲಕ ವಿದ್ಯಾರ್ಥಿಗಳನ್ನು ಸೆಳೆಯಲು ಯತ್ನಿಸುತ್ತಿದ್ದಾರೆ.
ದಾಖಲಾತಿ ಹೆಚ್ಚಿಸಲು ಕಸರತ್ತು: ಈ ಖಾಸಗಿ ಕಾಲೇಜುಗಳಲ್ಲಿಯೇ ತೀವ್ರ ಪೈಪೋಟಿ ಇದೆ. ಸರ್ಕಾರಿ ಅನುದಾನಿತ ಕಾಲೇಜುಗಳು ಕೂಡ ಡಿಪ್ಲೊಮಾ ಸೇರ ಬಯಸುವ ವಿದ್ಯಾರ್ಥಿಗಳಿಗೆ ಹಾಗೂ ಅವರ ಪೋಷಕರಿಗೆ ಮಾಹಿತಿ ನೀಡುವ ಪೈಪೋಟಿಯಲ್ಲಿ ತೊಡಗಿದ್ದಾರೆ. ತುಮಕೂರು ನಗರದಲ್ಲಿ ಒಂದು ಅನುದಾನಿತ ಡಿಪ್ಲೊಮಾ ಕಾಲೇಜು ಸೇರಿದಂತೆ 8 ಖಾಸಗಿ ಡಿಪ್ಲೊಮಾ ಕಾಲೇಜುಗಳಿವೆ.
ಅನುದಾನಿತ ಡಿಪ್ಲೊಮಾ ಕಾಲೇಜುಗಳಿಗೆ ವಿದ್ಯಾರ್ಥಿಗಳ ದಾಖಲಾತಿ ಕಡಿಮೆಯಾದರೆ ಅನುದಾನ ಕಡಿತವಾಗುವ ಸಾಧ್ಯತೆ ಇದೆ. ಹೀಗಾಗಿ ಅಲ್ಲಿನ ಕಾಲೇಜು ಸಿಬ್ಬಂದಿ ಹಾಗೂ ಪ್ರಾಧ್ಯಾಪಕರು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್ ಬಳಿ ಕುಳಿತು ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.