ತುಮಕೂರು:ಪೊಲೀಸ್ ಕಾನ್ಸ್ಟೇಬಲ್ ಹುದ್ದೆಯ ನೇಮಕಾತಿಗೆ ಪ್ರಕ್ರಿಯೆಯಲ್ಲಿ ವಯೋಮಿತಿ ಹೆಚ್ಚಿಸುವಂತೆ ಮನವಿ ಮಾಡಿದ ಆಕಾಂಕ್ಷಿಗಳು ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಕಾಲಿಗೆ ಬಿದ್ದು ಮನವಿ ಮಾಡಿದ ಘಟನೆ ನಡೆಯಿತು. ತುಮಕೂರಿನ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯುತ್ತಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ವೇಳೆ ಮನವಿ ಪತ್ರ ನೀಡಿದ ನಂತರ ಕಣ್ಣೀರು ಹಾಕುತ್ತ ಕಾಲಿಗೆ ಬಿದ್ದು ಕೇಳಿಕೊಂಡರು.
ಪೊಲೀಸ್ ಇಲಾಖೆಯಲ್ಲಿ ಸಿಎಆರ್ ಮತ್ತು ಡಿ.ಎ. 20 ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಹುದ್ದೆಗಳನ್ನು ಭರ್ತಿ ಮಾಡಲು ಸಾಮಾನ್ಯ ವರ್ಗಕ್ಕೆ ಗರಿಷ್ಠ 25, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಗರಿಷ್ಠ 27 ವರ್ಷಗಳನ್ನು ನಿಗದಿಪಡಿಸಲಾಗಿರುತ್ತದೆ.
ಸಚಿವರ ಕಾಲಿಗೆ ಬಿದ್ದ ಪೊಲೀಸ್ ಕಾನ್ಸ್ಟೆಬಲ್ ಆಕಾಂಕ್ಷಿಗಳು ಕೊರೊನಾ ಹೆಮ್ಮಾರಿ ದೇಶಾದ್ಯಂತ ಹಬ್ಬಿ ಪೊಲೀಸ್ ಪೇದೆಗಳ ಆಕಾಂಕ್ಷಿಗಳಿಗೆ ತುಂಬಾ ತೊಂದರೆ ಉಂಟುಮಾಡಿತ್ತು. ಅಲ್ಲದೆ, ಈ ಅವಧಿಯಲ್ಲಿ ಕಾನ್ಸ್ಟೇಬಲ್ ಹುದ್ದೆಗೆ ನೇಮಕಾತಿ ಮಾಡಲು ಸರ್ಕಾರ ಕ್ರಮ ವಹಿಸದೆ ಇದ್ದ ಕಾರಣದಿಂದ ಅಭ್ಯರ್ಥಿಗಳಿಗೆ ನಿರಾಶೆ ಉಂಟಾಗಿರುತ್ತದೆ. ಪ್ರಸ್ತುತ ಅರ್ಜಿ ಅಹ್ವಾನಿಸಿರುವ ಕಾನ್ಸ್ಟೇಬಲ್ ಹುದ್ದೆಗಳ ಆಕಾಂಕ್ಷಿಗಳಾದ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ವಯೋಮಿತಿಯನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಪೊಲೀಸ್ ಇಲಾಖೆಯ ಕಾನ್ಸ್ಟೇಬಲ್ ಹುದ್ದೆಗೆ ನೆರೆಯ ರಾಜ್ಯಗಳಾದ ರಾಜಸ್ಥಾನ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಕೇರಳ ರಾಜ್ಯಗಳಲ್ಲಿ ಗರಿಷ್ಠ ವಯೋಮಿತಿಯ 28 ವರ್ಷದಿಂದ 38 ವರ್ಷಗಳವರೆಗೆ ನಿಗದಿಪಡಿಸಲಾಗಿರುತ್ತದೆ. ಅದರಂತೆ ನಮ್ಮ ರಾಜ್ಯದ ಪೊಲೀಸ್ ಇಲಾಖೆಯ ಕಾನ್ಸ್ಟೇಬಲ್ ಹುದ್ದೆಗಳಿಗೂ ಗರಿಷ್ಠ ವಯೋಮಿತಿಯನ್ನು ಹೆಚ್ಚಿಸುವಂತೆ ಸಚಿವರಿಗೆ ಬೇಡಿಕೊಂಡರು.
ಇದನ್ನೂ ಓದಿ:ಎನ್ಐಎಗೆ ಹೆಚ್ಚಿನ ಅಧಿಕಾರ, ಸಿಆರ್ಪಿಸಿ-ಐಪಿಸಿಗೆ ತಿದ್ದುಪಡಿ: ಅಮಿತ್ ಶಾ ಮಹತ್ವದ ಘೋಷಣೆ