ತುಮಕೂರು: ದಲಿತ ಸಮುದಾಯದ ಮಾಜಿ ಗ್ರಾಮ ಸಹಾಯಕ ಕೆಂಪಯ್ಯ ಎಂಬ ವ್ಯಕ್ತಿಯ ಕೊಲೆ ತನಿಖೆ ನಡೆಸದ ಪೊಲೀಸ್ ಅಧಿಕಾರಿಗಳು, ಆರೋಪಿಗಳ ಜೊತೆ ಶಾಮೀಲಾಗಿ ಕೊಲೆ ಕೇಸ್ ಮುಚ್ಚಿ ಹಾಕುವ ಕಾರ್ಯ ಮಾಡುತ್ತಿದ್ದಾರೆ ಎಂದು ಕರ್ನಾಟಕ ಶೋಷಿತ ಸಮುದಾಯಗಳ ಸಮನ್ವಯ ಸಮಿತಿಯ ಅಧ್ಯಕ್ಷ ಎಂ. ಗುರುಮೂರ್ತಿ ಆರೋಪಿಸಿದ್ದಾರೆ.
ಪೊಲೀಸರಿಂದ ಕೊಲೆ ಕೇಸ್ ಮುಚ್ಚಿ ಹಾಕುವ ಪ್ರಯತ್ನ: ಎಂ. ಗುರುಮೂರ್ತಿ
ದಲಿತ ವ್ಯಕ್ತಿಯ ಕೊಲೆಗೆ ಸಬಂಧಪಟ್ಟಂತೆ ತುಮಕೂರು ಪೊಲೀಸರು ಆರೋಪಿಗಳ ಜೊತೆ ಶಾಮೀಲಾಗಿ ಕೊಲೆ ಕೇಸ್ ಮುಚ್ಚಿ ಹಾಕುವ ಕೆಲಸ ಮಾಡುತ್ತಿದ್ದಾರೆ ಎಂದು ಕರ್ನಾಟಕ ಶೋಷಿತ ಸಮುದಾಯಗಳ ಸಮನ್ವಯ ಸಮಿತಿಯ ಅಧ್ಯಕ್ಷ ಎಂ. ಗುರುಮೂರ್ತಿ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಡಾ. ಬಿ.ಆರ್ ಅಂಬೇಡ್ಕರ್ ಜನ್ಮ ದಿನದಂದು ತುರುವೇಕೆರೆ ತಾಲೂಕಿನ ಗಿರಿಯನಹಳ್ಳಿ ಗ್ರಾಮದ ಮಾಜಿ ಗ್ರಾಮ ಸಹಾಯಕನಾದ ಕೆಂಪಯ್ಯನನ್ನು ಕೊಲೆ ಮಾಡಲಾಗಿದೆ. ಸರ್ಕಾರಿ ಜಮೀನನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಸ್ಥಳೀಯ ಅಧಿಕಾರಿಗಳಿಗೆ ಇವರು ಮಾಹಿತಿ ನೀಡಿದ್ದರು. ಇದರಿಂದ ಅಕ್ರಮ ಚಟುವಟಿಕೆಯಲ್ಲಿ ತೊಡಗಿದ್ದ ದುಷ್ಕರ್ಮಿಗಳು ಹಲ್ಲೆ ಮಾಡಿ ಕೆಂಪಯ್ಯನನ್ನು ಕೊಲೆ ಮಾಡಿದ್ದಾರೆ. ಕೊಲೆಯಾದ ಕೆಂಪಯ್ಯ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಆದರೆ, ಪೊಲೀಸರು ಆರೋಪಿಗಳ ಜೊತೆ ಶಾಮೀಲಾಗಿ ಈ ಕೊಲೆಯನ್ನು ಅಸಹಜ ಸಾವು ಎಂದು ಹೇಳಿ ಸುಮ್ಮನಾಗಿದ್ದಾರೆ. ನಂತರ ಪ್ರಕರಣವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ತಿಳಿಸಿದ್ದರಿಂದ ಇದೇ ತಿಂಗಳ 16ರಂದು ದೂರು ದಾಖಲಾಗಿದೆ. ಇಲ್ಲಿಯವರೆಗೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರನ್ನೂ ಬಂಧಿಸಿಲ್ಲ. ಪೊಲೀಸರು ಈಗಲಾದರೂ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ದಲಿತರ ಮೇಲೆ ನಡೆಯುತ್ತಿರುವ ಹಲ್ಲೆಗಳನ್ನು ತಡೆಯುವ ಕೆಲಸ ಮಾಡಬೇಕಿದೆ ಎಂದು ಎಂ. ಗುರುಮೂರ್ತಿ ಮನವಿ ಮಾಡಿದರು.