ತುಮಕೂರು:ಮಹಿಳೆಯೊಬ್ಬರನ್ನು ದೊಣ್ಣೆಯಿಂದ ಹೊಡೆದು ಹತ್ಯೆ ಮಾಡಿ ಮನೆಯ ಶೌಚಾಲಯದ ಗುಂಡಿಯಲ್ಲಿ ಶವ ಹೂತು ಹಾಕಿದ್ದ ಪ್ರಕರಣದಲ್ಲಿ ಅಪರಾಧಿಗೆ ಇಲ್ಲಿನ ಜಿಲ್ಲಾ 6ನೇ ಅಧಿಕ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ತುಮಕೂರು ತಾಲೂಕಿನ ಹೆಬ್ಬೂರು ಹೋಬಳಿ ಎ.ಕೆ ಕಾವಲು ಗ್ರಾಮದ ಹನುಮಂತೇಗೌಡ ಎಂಬಾತ ತಾಲೂಕಿನ ಉಳ್ಳೇನಹಳ್ಳಿ ಗ್ರಾಮದ ಮಹಿಳೆ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ. ಆದರೆ, ಮಹಿಳೆಯು ಬೇರೆ ಪುರುಷರೊಂದಿಗೆ ಒಡನಾಟ ಹೊಂದಿದ್ದಾಳೆ ಎಂದು ಕ್ಯಾತೆ ತೆಗೆದು ಹನುಮಂತೇಗೌಡ ಆಗಾಗ ಜಗಳ ಮಾಡುತ್ತಿದ್ದ.
2017ರ ನವೆಂಬರ್ 9ರಂದು ಮಹಿಳೆಯು ಹನುಮಂತೇಗೌಡನ ಮನೆಗೆ ಬಂದಿದ್ದ ವೇಳೆ ಪುನಃ ಜಗಳವಾಗಿತ್ತು. ಆಗ ಹನುಮಂತೇಗೌಡ ಆಕೆಯ ತಲೆಗೆ ಬಿದಿರು ದೊಣ್ಣೆಯಿಂದ ಹೊಡೆದು ಸಾಯಿಸಿದ್ದ. ಬಳಿಕ ಮೃತದೇಹವನ್ನು ತನ್ನ ಮನೆಯ ಶೌಚಾಲಯದ ಗುಂಡಿಯಲ್ಲಿ ಹೂತು ಹಾಕಿದ್ದ.