ಕರ್ನಾಟಕ

karnataka

ETV Bharat / state

ವಿದ್ಯಾರ್ಥಿಗಳ ಮೇಲೆ ವಸತಿ ಶಾಲೆ ಕಾರ್ಯದರ್ಶಿ ಮಗನಿಂದ ಹಲ್ಲೆ: ಪ್ರಕರಣ ದಾಖಲು - Government aided residential school

ವಸತಿ ಶಾಲೆಯಲ್ಲಿನ ವಿದ್ಯಾರ್ಥಿಗಳ ಮೇಲೆ ಶಾಲೆಯ ಕಾರ್ಯದರ್ಶಿಯ ಮಗ ಮನಬಂದಂತೆ ಥಳಿಸಿರುವ ಘಟನೆ ತುಮಕೂರು ತಾಲೂಕಿನ ಮಲ್ಲಸಂದ್ರದಲ್ಲಿ ಬೆಳಕಿಗೆ ಬಂದಿದೆ.

person-allegedly-assaults-on-students-in-tumakuru
ವಿದ್ಯಾರ್ಥಿಗಳ ಮೇಲೆ ವಸತಿ ಶಾಲೆ ಕಾರ್ಯದರ್ಶಿ ಮಗನಿಂದ ಹಲ್ಲೆ ಆರೋಪ: ದೂರು ದಾಖಲು

By

Published : Nov 25, 2022, 7:41 PM IST

ತುಮಕೂರು: ವಿದ್ಯಾರ್ಥಿಗಳ ಮೇಲೆ ಶಾಲೆಯ ಕಾರ್ಯದರ್ಶಿಯ ಮಗ ಮನಬಂದಂತೆ ಥಳಿಸಿರುವ ಘಟನೆ ತಾಲೂಕಿನ ಮಲ್ಲಸಂದ್ರದ ವಿಶ್ವಭಾರತಿ ಸರ್ಕಾರಿ ಅನುದಾನಿತ ವಸತಿ ಶಾಲೆಯಲ್ಲಿ ನಡೆದಿದೆ. ಕಳೆದ ಸೋಮವಾರ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಶಾಲೆಯ ಕಾರ್ಯದರ್ಶಿ ಎನ್. ಮೂರ್ತಿ ಎಂಬುವರ ಮಗ ಭರತ್​ ಎಂಬಾತ ಕುಡಿದ ಮತ್ತಿನಲ್ಲಿ ಮಕ್ಕಳಿಗೆ ಮನಸೋ ಇಚ್ಚೆ ಥಳಿಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಘಟನೆ ನಡೆದು ನಾಲ್ಕು ದಿನಗಳು ಕಳೆದರೂ ಈ ಬಗ್ಗೆ ಮಾಹಿತಿ ಮುಚ್ಚಿಟ್ಟಿದ್ದ ಶಾಲಾ ಆಡಳಿತ ಮಂಡಳಿ ಬಳಿಕ ಈ ಬಗ್ಗೆ ಪೋಷಕರಿಗೆ ತಿಳಿಸಿದೆ.

ಶಾಲೆಯ ವಸತಿ ನಿಲಯಕ್ಕೆ ಸೋಮವಾರ ರಾತ್ರಿ 10 ಗಂಟೆ ವೇಳೆಗೆ ಬಂದ ಭರತ್, ಮದ್ಯದ ನಶೆಯಲ್ಲಿ ಬೆಲ್ಟ್ ಮತ್ತು ದೊಣ್ಣೆಯಿಂದ ಹಲ್ಲೆ ಮಾಡಿದ್ದಾನೆ. ಸುಮಾರು 40 ಮಕ್ಕಳಿಗೆ ಸಾಲಾಗಿ ನಿಲ್ಲಿಸಿ ಥಳಿಸಿದ್ದಾನೆ. ಹೊಡೆಯಬೇಡ ಎಂದು ಎಷ್ಟೇ ಅಂಗಲಾಚಿದರೂ ಕೇಳಲಿಲ್ಲ ಎನ್ನಲಾಗಿದೆ.

ಮಕ್ಕಳ ತೊಡೆ‌ ಮತ್ತು ಮರ್ಮಾಂಗದ ಮೇಲೆ ಹಲ್ಲೆ ಮಾಡಲಾಗಿದೆ. ಓರ್ವ ಬಾಲಕನ ಕೈ ಮುರಿದಿದ್ದು, ಆದರೆ ಶಾಲಾ ಆಡಳಿತ ಮಂಡಳಿ ಮಕ್ಕಳಿಗೆ ಚಿಕಿತ್ಸೆ ಕೂಡ ಕೊಡಿಸಿಲ್ಲ. ಮಂಡಳಿಯವರು ಘಟನೆ ನಡೆದು ಮೂರು ದಿನಗಳ ನಂತರ ಮಕ್ಕಳ ಪೋಷಕರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ ಎನ್ನಲಾಗುತ್ತಿದೆ.

ವಿಚಾರ ತಿಳಿಯುತ್ತಿದ್ದಂತೆ ಪೋಷಕರು ವಸತಿ ನಿಲಯದತ್ತ ರಾತ್ರೋರಾತ್ರಿ ಓಡೋಡಿ ಬಂದಿದ್ದಾರೆ. ಇಂದು ಆರೋಪಿ ಭರತ್​ ವಿರುದ್ಧ ತುಮಕೂರು ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ದೂರು ನೀಡಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಲೆಮರೆಸಿಕೊಂಡಿರುವ ಆರೋಪಿಗಾಗಿ ಹುಡುಕಾಟ‌ ನಡೆಸಿದ್ದಾರೆ.

ಘಟನೆ ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ನಂಜಯ, ಶಾಲಾ ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಿದ್ದಾರೆ.

ಇದನ್ನೂ ಓದಿ:ಕಾಲೇಜುಗಳ ಪ್ರವೇಶ ಪಡೆಯಲು ವಿದ್ಯಾರ್ಥಿಗಳಿಗೆ ಮತದಾರರ ನೋಂದಣಿ ಕಡ್ಡಾಯ?

ABOUT THE AUTHOR

...view details