ತುಮಕೂರು:ಕೊರೊನಾ ಲಾಕ್ಡೌನ್ನಿಂದ ಆರ್ಥಿಕ ಸಂಕಷ್ಟಕ್ಕೆ ಗುರಿಯಾದ ಪೋಷಕರು, ಮಕ್ಕಳನ್ನು ಖಾಸಗಿ ಶಾಲೆಯಿಂದ ಸರ್ಕಾರಿ ಶಾಲೆಗೆ ಸೇರಿಸಲು ಮುಂದಾಗಿದ್ದಾರೆ. ಹೀಗಾಗಿ ಗ್ರಾಮೀಣ ಭಾಗದಲ್ಲಿ ಮಕ್ಕಳ ದಾಖಲಾತಿ ಕೊರತೆಯಿಂದ ಮುಚ್ಚಿರುವ ಸರ್ಕಾರಿ ಶಾಲೆಗಳನ್ನು ಪುನಃ ಆರಂಭಿಸುವಂತೆ ಪೋಷಕರಿಂದ ಬೇಡಿಕೆ ಬರುತ್ತಿದೆ.
ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಳ ಕಳೆದ ವರ್ಷ ಕೊರೊನಾ ಮೊದಲ ಅಲೇ ವೇಳೆಯೇ ಜಿಲ್ಲೆಯ ಅನೇಕ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸಿದ್ದರು. ಇದೀಗ ಕೊರೊನಾ ಕಥೆ ಅಷ್ಟಕ್ಕೆ ಮುಗಿಯದೇ ಮುಂದುವರಿದ ಕಾರಣ, ಎರಡನೇ ಅಲೆಯಲ್ಲಿ ಇನ್ನಷ್ಟು ಮಂದಿ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲು ಉತ್ಸುಕರಾಗಿದ್ದಾರೆ. ಕಳೆದ ವರ್ಷ ಸಾಮಾನ್ಯ ದಾಖಲಾತಿಗಿಂತ ಸರ್ಕಾರಿ ಶಾಲೆಗಳಿಗೆ ಖಾಸಗಿ ಶಾಲೆಗಳಿಂದ 3800 ವಿದ್ಯಾರ್ಥಿಗಳು ಹೆಚ್ಚುವರಿಯಾಗಿ ದಾಖಲಾಗಿದ್ದಾರೆ. ಈ ಬಾರಿಯೂ ದಾಖಲಾತಿ ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ.
ಕೊರೊನಾದಿಂದ ಉಂಟಾದ ಆದಾಯದ ಕುಸಿತದಿಂದ ಖಾಸಗಿ ಶಾಲೆಗಳಿಗೆ ದುಬಾರಿ ಶುಲ್ಕ ಪಾವತಿಸಲು ಸಾಧ್ಯವಾಗದೆ ಸರ್ಕಾರಿ ಶಾಲೆಗೆ ಮಕ್ಕಳನ್ನು ದಾಖಲಿಸಲಾಗಿದೆ. ಮತ್ತೊಂದೆಡೆ ಕೊರೊನಾ ಅಲೆ ವೇಳೆ ಬಸ್ ಸಂಚಾರ ವ್ಯವಸ್ಥೆ ಇಲ್ಲದ ಕಾರಣ ಖಾಸಗಿ ಶಾಲೆಗಳ ಮಕ್ಕಳು ಹತ್ತಿರದ ಸರ್ಕಾರಿ ಶಾಲೆಗಳಿಗೆ ಸೇರುತ್ತಿದ್ದಾರೆ.
ಕೊರೊನಾ ವಕ್ಕರಿಸಿದ ಬಳಿಕ ಗ್ರಾಮೀಣ ಭಾಗದ ಪೋಷಕರಲ್ಲಿ ಸರ್ಕಾರಿ ಶಾಲೆಯಲ್ಲಿಯೂ ಉತ್ತಮ ಮೂಲಭೂತ ಸೌಲಭ್ಯ ದೊರೆಯಲಿದೆ ಎಂಬ ವಿಶ್ವಾಸ ಮೂಡಿದೆ. ಕಾರಣ ಏನೇ ಇರಲಿ ಖಾಸಗಿ ಶಾಲೆಗಳ ಮೇಲಿನ ಒಲವು ಇದೀಗ ಸರ್ಕಾರಿ ಶಾಲೆಗಳತ್ತ ತಿರುಗಿರುವುದು ಗಮನಾರ್ಹ ಬೆಳವಣಿಗೆಯೇ ಸರಿ. ಏಕೆಂದರೆ ಕೊರೊನಾ ಸೋಂಕು ಹರಡುವಿಕೆಗೂ ಮುನ್ನ ತುಮಕೂರು ಜಿಲ್ಲೆಯಲ್ಲಿ ಬಹುತೇಕ ಕಡೆ ಮಕ್ಕಳ ದಾಖಲಾತಿ ಇಲ್ಲದೆ ಸರ್ಕಾರಿ ಸ್ಕೂಲ್ಗಳಿಗೆ ಬೀಗ ಜಡಿಯಲಾಗಿತ್ತು. ಆದ್ರೆ ಈ ವರ್ಷ ಜಿಲ್ಲೆಯ ಎರಡು ಕಡೆ ಗ್ರಾಮೀಣ ಭಾಗದಲ್ಲಿ ಬಂದ್ ಆಗಿರೋ ಸರ್ಕಾರಿ ಶಾಲೆಯನ್ನು ಆರಂಭಿಸುವಂತೆ ಗ್ರಾಮೀಣ ಶಿಕ್ಷಣ ಇಲಾಖೆಗೆ ಮನವಿ ಮಾಡುತ್ತಿದ್ದಾರೆ ಪೋಷಕರು.
ಜಿಲ್ಲೆಯ ಕುಣಿಗಲ್ ತಾಲೂಕಿನ ಬೇಗೂರು ಗ್ರಾಮದ ಪೋಷಕರು ಗ್ರಾಮದಲ್ಲಿ ಮಕ್ಕಳ ದಾಖಲಾತಿ ಇಲ್ಲದೆ ಮುಚ್ಚಲಾಗಿದ್ದ ಸರ್ಕಾರಿ ಪ್ರಾಥಮಿಕ ಶಾಲೆಯನ್ನು ಆರಂಭಿಸುವಂತೆ ಶಿಕ್ಷಣ ಇಲಾಖೆಗೆ ದಂಬಾಲು ಬಿದ್ದಿದ್ದಾರೆ. ಮನವಿಯನ್ನು ಪರಿಶೀಲಿಸಿರುವ ಶಿಕ್ಷಣ ಇಲಾಖೆ ಅಧಿಕಾರಿಗಳು ಗ್ರಾಮದಲ್ಲಿ ಮಕ್ಕಳ ಸಂಖ್ಯೆಯನ್ನು ಆಧರಿಸಿ ಶಾಲೆಯನ್ನು ಪುನಃ ಆರಂಭಿಸುವ ಕುರಿತು ಚಿಂತನೆ ನಡೆಸುತ್ತಿದ್ದಾರೆ.
ಅದೇ ರೀತಿ ಚಿಕ್ಕನಾಯಕನಹಳ್ಳಿ ತಾಲೂಕಿನ ಗ್ರಾಮದಲ್ಲಿಯೂ ಮಕ್ಕಳ ದಾಖಲಾತಿ ಕೊರತೆಯಿಂದ ಮುಚ್ಚಿದ್ದ ಶಾಲೆಯನ್ನು ಮತ್ತೆ ಆರಂಭಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ. ಊರನ್ನು ಬಿಟ್ಟು ಬೇರೆಡೆ ಹೋಗಿ ವ್ಯಾಸಂಗ ಮಾಡುವುದಕ್ಕೆ ಕಡಿವಾಣ ಹಾಕಲು, ಗ್ರಾಮದಲ್ಲಿಯೇ ಮುಚ್ಚಿರುವ ಶಾಲೆಯನ್ನು ಆರಂಭಿಸಲು ಕ್ರಮ ತೆಗೆದುಕೊಳ್ಳುವಂತೆ ಶಿಕ್ಷಣ ಇಲಾಖೆಗೆ ಮನವಿ ಮಾಡಿದ್ದಾರೆ. ಹೀಗಾಗಿ ಬಿಇಒ ಸ್ಥಳಕ್ಕೆ ಭೇಟಿ ನೀಡಿ ಶಾಲೆ ಆರಂಭಿಸುವ ಕುರಿತಂತೆ ಪರಿಶೀಲನೆ ನಡೆಸುತ್ತಿದ್ದಾರೆ. ಈ ಹಿನ್ನೆಲೆ ಕಳೆದ ಶೈಕ್ಷಣಿಕ ವರ್ಷದಂತೆ ಈ ಬಾರಿಯೂ ಖಾಸಗಿ ಶಾಲೆಗಳಿಂದ ಸರ್ಕಾರಿ ಶಾಲೆಗಳಿಗೆ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ. ನಂಜಯ್ಯ.