ತುಮಕೂರು:ಡಿಸೆಂಬರ್ 6ರಂದು ಸಿದ್ದಗಂಗಾ ಮಠದಲ್ಲಿ ಆಯೋಜಿಸಲಾಗಿರುವ ಮಠದ ಕಾರ್ಯಕ್ರಮಕ್ಕೆ ಮಾಜಿ ಸಚಿವ ವಿ. ಸೋಮಣ್ಣ ನಮ್ಮನ್ನು ಆಹ್ವಾನ ಮಾಡಿದ್ದಾರೆ, ನಾನು ಮತ್ತು ರಾಜಣ್ಣ ಹೋಗುತ್ತಿದ್ದೇವೆ ಎಂದು ಸಚಿವ ಜಿ ಪರಮೇಶ್ವರ್ ತಿಳಿಸಿದ್ದಾರೆ.
ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸೋಮಣ್ಣ, ಲಿಂಬಾವಳಿ ಕಾಂಗ್ರೆಸ್ ಸೇರ್ಪಡೆಯಾಗ್ತಾರೆ ಅನ್ನೋ ವಿಚಾರವು ಕೆಪಿಸಿಸಿ ಅಧ್ಯಕ್ಷರ ಮಟ್ಟದಲ್ಲಿ ನಡೆಯುತ್ತೆ. ನಮ್ಮ ಹಂತದಲ್ಲಿ ನಡೆಯೋದಿಲ್ಲ ಎಂದರು. ಬಳಿಕ ತುಮಕೂರು ಲೋಕಸಭಾ ಚುನಾವಣೆ ಕುರಿತ ಪಕ್ಷದ ಸಭೆ ವಿಳಂಬವಾಗುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಕೃಷ್ಣ ಬೈರೇಗೌಡರನ್ನ ಜಿಲ್ಲೆಗೆ ಉಸ್ತುವಾರಿ ಮಾಡಲಾಗಿದೆ. ಅವರು ಬಂದು ಸಭೆಯನ್ನು ನಡೆಸುತ್ತಾರೆ. ಕಾರ್ಯಕರ್ತರ, ಮುಖಂಡರ ಸಭೆ ನಡೆಸಿ ಕೆಪಿಸಿಸಿಗೆ ವರದಿ ಕೊಡ್ತಾರೆ, ಆ ವರದಿಯನ್ನ ನೋಡಿಕೊಂಡು ಮುಂದಿನ ಬೆಳವಣಿಗೆ ನಡೆಯುತ್ತೆ. ಅವರು ಈವರೆಗೂ ಬೇರೊಂದು ಕೆಲಸದಲ್ಲಿ ಬ್ಯುಸಿಯಾಗಿದ್ದರು. ನಾನು ಕೂಡ ಅವರ ಜೊತೆ ಮಾತನಾಡಿದ್ದೇನೆ. ಶೀಘ್ರದಲ್ಲಿ ಸಭೆಯನ್ನು ನಡೆಸುತ್ತಾರೆ ಎಂದರು.
ಜಾತಿಗಣತಿ ವರದಿ ಗೊಂದಲವಾಗಿರೋ ವಿಚಾರಕ್ಕೆ ಪ್ರತಿಕ್ರಿಯಿಸಿ, ಆ ವರದಿಯನ್ನು ನಾವಿನ್ನು ಹೊರಗೆ ತಂದೇ ಇಲ್ಲ, ಆಯೋಗದವರು ವರದಿಯನ್ನ ಸರ್ಕಾರಕ್ಕೆ ಕೊಟ್ಟ ನಂತರ, ಸರ್ಕಾರ ಅದನ್ನು ತೀರ್ಮಾನ ಮಾಡುತ್ತೆ. ಮೂಲ ಪ್ರತಿ ಕಾಣೆ ಆಗಿದೆ ಅನ್ನೋದೆಲ್ಲ ಸುಳ್ಳು. ಆಯೋಗದ ಅಧ್ಯಕ್ಷರಿಗೆ ಒಂದು ತಿಂಗಳು ಹೆಚ್ಚಿಗೆ ಕಾಲಾವಕಾಶ ನೀಡಲಾಗಿದೆ. ವರದಿನೇ ಆಚೆ ಬಂದಿಲ್ಲ, ವರದಿ ಆಚೆ ಬಂದ ನಂತರ ಪರ ವಿರೋಧ ಅಭಿಪ್ರಾಯಗಳು ಕೇಳಿಬರಬಹುದು.
ಏನೂ ಇಲ್ಲದೇನೆ ಹೀಗೆ ಚರ್ಚೆ ನಡೆಸೋದು ಎಷ್ಟರ ಮಟ್ಟಿಗೆ ಸರಿ. ವಿರೋಧ ಪಕ್ಷದವರು ಕೂಡ ಏನೇನೋ ಹೇಳಿಕೆಗಳನ್ನ ಕೊಡ್ತಿದ್ದಾರೆ, ವರದಿ ಬಂದ ಮೇಲೆ ತಾನೇ ಅದೆಲ್ಲ ಮಾತನಾಡೋದು ಎಂದು ತಿಳಿಸಿದರು.