ತುಮಕೂರು: ಕೊರೊನಾ ಸೋಂಕಿನ ಎರಡನೇ ಅಲೆಯ ವೇಳೆ ಅನೇಕ ಮಂದಿಗೆ ಪೂರಕ ವೈದ್ಯಕೀಯ ಚಿಕಿತ್ಸೆ ಲಭಿಸದೆ ಮೃತಪಟ್ಟಿದ್ದಾರೆ. ಅದರಲ್ಲೂ ಬಹು ಮುಖ್ಯವಾಗಿ ಆಕ್ಸಿಜನ್ ಕೊರತೆಯೇ ಕಾರಣವಾಗಿತ್ತು ಎಂದು ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ತಿಳಿಸಿದ್ದಾರೆ.
ಜಿಲ್ಲಾಸ್ಪತ್ರೆ ಸಭಾಂಗಣದಲ್ಲಿ ನಿನ್ನೆ ಐಕ್ಯಾಟ್ ಸಂಸ್ಥೆಯಿಂದ ಹಮ್ಮಿಕೊಳ್ಳಲಾಗಿದ್ದ ಆಕ್ಸಿಜನ್ ಲೈನ್ ಉದ್ಘಾಟನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಕೋವಿಡ್ ಎರಡನೇ ಅಲೆ ಸಂದರ್ಭದಲ್ಲಿ ಆಕ್ಸಿಜನ್ ಕೊರತೆ ನೀಗಿಸಲು ಸಾಕಷ್ಟು ಕ್ರಮ ವಹಿಸಿದರೂ ಪರದಾಡುವಂತಾಗಿತ್ತು. ಆಕ್ಸಿಜನ್ ಕೊರತೆಯಿಂದ ಅನೇಕ ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿಸಿದರು.
ಆಕ್ಸಿಜನ್ ಲೈನ್ ಉದ್ಘಾಟನಾ ಕಾರ್ಯಕ್ರಮ ಕೊರೊನಾ ನಿರ್ವಹಣೆಯಲ್ಲಿ ದಾನಿಗಳ ನೆರವಿನ ಸೇವಾ ಕೊಡುಗೆಯೂ ಶ್ರೇಷ್ಠವಾದದ್ದು. ಐಕ್ಯಾಟ್ ಸಂಸ್ಥೆಯು ಕೊಡುಗೆ ರೂಪದಲ್ಲಿ ಜಿಲ್ಲಾಸ್ಪತ್ರೆಯ 75 ಹಾಸಿಗೆಗಳಿಗೆ ಆಮ್ಲಜನಕ ಕಲ್ಪಿಸಲು ಮುಂದಾಗಿರುವುದು ನಿಜಕ್ಕೂ ಶ್ಲಾಘನೀಯವಾದುದಾಗಿದೆ ಎಂದರು.
ಹಲವು ಸಂಕಷ್ಟದ ನಡುವೆಯೂ ವೈದ್ಯರು ಒಳಗೊಂಡಂತೆ ಎಲ್ಲರ ಸಹಕಾರದಿಂದ ಕೋವಿಡ್ ಎರಡನೇ ಅಲೆ ಗೆದ್ದಿದ್ದೇವೆ. ಈ ಗೆಲುವಿನ ಹಿಂದೆ ದಾನಿಗಳ ನೆರವಿನ ಫಲವೂ ಇದೆ. ಕೋವಿಡ್ ಎರಡನೇ ಅಲೆ ಅಪ್ಪಳಿಸಿದಾಗ ಆಮ್ಲಜನಕದ ಸಮಸ್ಯೆ ಎದುರಾದ ಸಂದರ್ಭದಲ್ಲಿ ಎನ್ಜಿಒಗಳು ಆಮ್ಲಜನಕ ಸೇರಿದಂತೆ ಇತರೆ ನೆರವನ್ನು ನೀಡಿ ಕೊರೊನಾ ಎದುರಿಸಲು ಸಹಕಾರಿಯಾಗಿದ್ದಾರೆ ಎಂದರು.
ಸೋಂಕಿತರ ಆರೈಕೆಗೆ ನಿಂತ ವೈದ್ಯರಂತೆಯೇ ಶುಶ್ರೂಕಿಯರ ಕಾರ್ಯವೂ ಅತ್ಯುತ್ತಮ. ಆರೋಗ್ಯವಂತ ಸಮಾಜಕ್ಕೆ ಅವರ ಸೇವೆ ಅಕ್ಷರಶಃ ಸರ್ವ ಶ್ರೇಷ್ಠವಾದುದಾಗಿದೆ ಎಂದು ಹೇಳಿದರು.
ಸಂಸದ ಜಿ.ಎಸ್. ಬಸವರಾಜು ಮಾತನಾಡಿ, ಕೊರೊನಾ ನಿರ್ವಹಣೆಗೆ ನೆರವಾಗುವ ಮೂಲಕ ದಾನಿಗಳು ವಾರಿಯರ್ಸ್ಗಳಂತೆಯೇ ಸೇವೆ ಸಲ್ಲಿಸಿದ್ದಾರೆ. ಜಿಲ್ಲಾಸ್ಪತ್ರೆಯ 75 ಹಾಸಿಗೆಗಳಿಗೆ ಆಮ್ಲಜನಕ ಪೈಪ್ ಲೈನ್ ಕಲ್ಪಿಸುವ ಮೂಲಕ ಐಕ್ಯಾಟ್ ಶ್ಲಾಘನೀಯ ಕೆಲಸ ಮಾಡಿದೆ. ಆಮ್ಲಜನಕ ಘಟಕ ಸ್ಥಾಪನೆಗೂ ನೆರವು ನೀಡಿದ್ದಾರೆ. ಜೀವವನ್ನು ಉಳಿಸುವ ದಾನಕ್ಕಿಂತ ಶ್ರೇಷ್ಠದಾನ ಮತ್ತೊಂದಿಲ್ಲ. ಈ ರೀತಿಯ ಕಾರ್ಯ ಮತ್ತಷ್ಟು ಮಾಡುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ನೆರವಾಗಬೇಕು ಎಂದು ಹೇಳಿದರು.
ಇದನ್ನೂ ಓದಿ:ನಗರದ ಧೂಳು ನಿಯಂತ್ರಿಸಲು BBMP ಹೊಸ ಪ್ಲಾನ್ ಏನ್ ಗೊತ್ತಾ?
ಐಕ್ಯಾಟ್ ಫೌಂಡೇಶನ್‌ನ ನಿರ್ದೇಶಕಿ ಡಾ. ಶಾಲಿನಿ ನಲ್ವಾಡ್ ಮಾತನಾಡಿ, ಕೊರೊನಾ ಕಾಲಘಟ್ಟದಲ್ಲಿ ಪ್ರತಿಯೊಬ್ಬ ವೈದ್ಯರೂ ದೈಹಿಕ ರೋಗದ ಜೊತೆಗೆ ಮಾನಸಿಕ ಕಾಯಿಲೆಯನ್ನು ಗುಣ ಮಾಡುತ್ತಿದ್ದಾರೆ. ಕೋವಿಡ್ ಅಲೆ ಅಪ್ಪಳಿಸಿದಾಗ ಆರೋಗ್ಯ ಸಿಬ್ಬಂದಿ ಯುದ್ದೋಪಾದಿಯಲ್ಲಿ ಸೇನಾನಿಯಂತೆ ಕರ್ತವ್ಯ ನಿರ್ವಹಿಸಿದ್ದಾರೆ. ಕಾಣದ ವೈರಸ್ ಶತ್ರು ವಿರುದ್ಧ ತಾನು, ತನ್ನದು, ತನ್ನ ಕುಟುಂಬವನ್ನೆಲ್ಲ ತೊರೆದು ಪ್ರಾಣದ ಹಂಗಿಲ್ಲದೆ ಜನರ ಜೀವಕ್ಕಾಗಿ ಹೋರಾಡಿದ್ದಾರೆ. ವೈದ್ಯಕೀಯ ಸೇವೆಯಂತೆಯೇ ಪೊಲೀಸ್ ಸೇರಿದಂತೆ ಇತರೆ ಎಲ್ಲ ಅಧಿಕಾರಿಗಳು ಹೋರಾಡಿದ್ದು, ಕೊರೊನಾ ನಿರ್ವಹಣೆಗೆ ದಾನಿಗಳು ಹೆಗಲಾಗಿದ್ದಾರೆ. ಅವರ ಸೇವೆಯೂ ಅವಿಸ್ಮರಣೀಯವಾಗಿದೆ ಎಂದರು. ಬಳಿಕ ತಮ್ಮ ಸಂಸ್ಥೆಯ ಸೇವಾ ಕಾರ್ಯಗಳ ಬಗ್ಗೆ ವಿವರಿಸಿದರು.