ತುಮಕೂರು: ಕೊರೊನಾ ಸೋಂಕು ಹರಡುವಿಕೆ ಭೀತಿ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಗುಂಪುಗೂಡಿ ಜೂಜಾಟ ಆಡದಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿತ್ತು. ಹೀಗಿದ್ದರೂ ನಿಯಮ ಉಲ್ಲಂಘಿಸಿ ಗ್ರಾಮೀಣ ಭಾಗದಲ್ಲಿ ಎಗ್ಗಿಲ್ಲದೆ ಜೂಜಾಟ ನಡೆಯುತ್ತಿತ್ತು. ಇದಕ್ಕೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಮುಂದಾಗಿದೆ.
ತುಮಕೂರಿನಲ್ಲಿ ನಿತ್ಯ 10ಕ್ಕೂ ಹೆಚ್ಚು ಜೂಜಾಟ ಪ್ರಕರಣ ದಾಖಲು: ಎಸ್ಪಿ ವಂಶಿಕೃಷ್ಣ
ಜಿಲ್ಲೆಯಲ್ಲಿ ನಿತ್ಯ ಒಂದಿಲ್ಲೊಂದು ಕಡೆ ದಾಳಿ ನಡೆಸಿ 10ಕ್ಕೂ ಹೆಚ್ಚು ಜೂಜಾಟ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ ಎಂದು ಎಸ್ಪಿ ಡಾ.ಕೆ.ವಂಶಿಕೃಷ್ಣ ಮಾಹಿತಿ ನೀಡಿದ್ದಾರೆ.
ಮೇ.10ರಿಂದ ಪೊಲೀಸರು ವಿಶೇಷ ದಾಳಿ ನಡೆಸಿ 60ಕ್ಕೂ ಹೆಚ್ಚು ಜೂಜಾಟ ಪ್ರಕರಣಗಳನ್ನು ದಾಖಲಿಸಿದ್ದಾರೆ. 130ಕ್ಕೂ ಹೆಚ್ಚು ಅಕ್ರಮ ಮದ್ಯ ಮಾರಾಟ ಪ್ರಕರಣಗಳು ದಾಖಲಾಗಿವೆ.10ಕ್ಕೂ ಹೆಚ್ಚು ಜೂಜಾಟ ಪ್ರಕರಣಗಳನ್ನು ದಾಖಲಿಸಲಾಗುತ್ತಿದ್ದು, ಡಾಬಾಗಳ ಮೇಲೆಯೂ ದಾಳಿ ಮಾಡಲಾಗಿದೆ.
ಚಿಕ್ಕನಾಯಕನಹಳ್ಳಿ ತಾಲೂಕಿನ ಗ್ರಾಮವೊಂದರ ಶಾಲಾ ಆವರಣದಲ್ಲಿ ಜೂಜಾಟದಲ್ಲಿ ತೊಡಗಿದ್ದವರಿಗೆ ಎಚ್ಚರಿಕೆ ನೀಡಿದ ತಹಶೀಲ್ದಾರ್ ಮೇಲೆಯೇ ಜೂಜುಕೋರರು ಹಲ್ಲೆಗೆ ಯತ್ನಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣ ತಿಳಿಸಿದ್ದಾರೆ.