ತುಮಕೂರು :ಇಂದಿನಿಂದ ನಮ್ಮ ಹೋರಾಟ ಬೇರೆ ರೀತಿ ನಡೆಯಲಿದೆ. ಸಾಹಿತಿಗಳು, ಲೇಖಕರು, ಸಾಮಾಜಿಕ ಹೋರಾಟಗಾರರು, ರೈತರು, ಸಂಘ-ಸಂಸ್ಥೆಗಳು, ವಿದ್ಯಾರ್ಥಿಗಳ ಜೊತೆ ಸೇರಿ ಜಿಲ್ಲೆ, ತಾಲೂಕು, ಪಂಚಾಯತ್ ಮಟ್ಟದಲ್ಲಿ ಧರಣಿ ನಡೆಸಲಾಗುವುದು ಎಂದು ಆಶಾ ಕಾರ್ಯಕರ್ತೆಯರು ಎಚ್ಚರಿಸಿದ್ದಾರೆ.
ಈ ಕುರಿತು ಜಿಲ್ಲಾ ಸಂಚಾಲಕಿ ಮಂಜುಳಾ ಮಾತನಾಡಿದ್ದು, ಜುಲೈ 10ರಿಂದ ರಾಜ್ಯಾದ್ಯಂತ ಆಶಾ ಕಾರ್ಯಕರ್ತೆಯರು ತಮ್ಮ ಕರ್ತವ್ಯ ಸ್ಥಗಿತಗೊಳಿಸಿ, ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮುಷ್ಕರ ನಡೆಸುತ್ತಿದ್ದಾರೆ. ಈವರೆಗೂ ಸರ್ಕಾರ ಯಾವುದೇ ರೀತಿ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಜನವರಿ ತಿಂಗಳಿನಿಂದಲೂ ನಮ್ಮ ಬೇಡಿಕೆಯನ್ನು ಸರ್ಕಾರಕ್ಕೆ ಸಲ್ಲಿಸುತ್ತಲೇ ಬಂದಿದ್ದೇವೆ.
ಸರ್ಕಾರಕ್ಕೆ ಆಶಾ ಕಾರ್ಯಕರ್ತೆಯರ ಎಚ್ಚರಿಕೆ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರಿಗೆ ಕನಿಷ್ಠ10 ಸಾವಿರ ವೇತನ ನೀಡಲಾಗುವುದು ಎಂದು ಸರ್ಕಾರ ಹೇಳಿತ್ತು. ಆದರೆ, ಈವರೆಗೂ ಈ ಮಾತು ಕಾರ್ಯರೂಪಕ್ಕೆ ಬಂದಿಲ್ಲ ಎಂದರು. ಇಂದಿಗೆ ನಮ್ಮ ಮುಷ್ಕರ 11ನೇ ದಿನಕ್ಕೆ ಕಾಲಿಟ್ಟಿದೆ. ನಮ್ಮ ಹೋರಾಟ ಇಂದಿನಿಂದ ಬೇರೆ ರೀತಿಯ ಸ್ವರೂಪ ಪಡೆಯಲಿದೆ. ಸಾಹಿತಿಗಳು, ಲೇಖಕರು, ಸಾಮಾಜಿಕ ಹೋರಾಟಗಾರರು, ರೈತರು, ಸಂಘ-ಸಂಸ್ಥೆಗಳು, ವಿದ್ಯಾರ್ಥಿಗಳ ಜೊತೆ ಗೂಡಿ ಜಿಲ್ಲೆ, ತಾಲೂಕು, ಪಂಚಾಯತ್, ಗ್ರಾಮಗಳ ಮಟ್ಟದಲ್ಲಿ ಧರಣಿ ನಡೆಸಲಾಗುವುದು ಎಂದು ಗುಡುಗಿದ್ದಾರೆ.
ಆಶಾ ಕಾರ್ಯಕರ್ತೆ ಶಾರದಮ್ಮ ಎಂಬುವರು ಮಾತನಾಡಿ, ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯ ವೇಳೆ ಸಂಬಳ ಹೆಚ್ಚಳ ಮಾಡಿ ನೀಡಲಾಗುವುದು ಎಂದು ತಿಳಿಸಿದರು. ಆದರೆ, ಈವರೆಗೂ ಸಂಬಳ ಹೆಚ್ಚಿಸಿಲ್ಲ. ನಿಗದಿತ ವೇಳೆಗೆ ಸರಿಯಾಗಿ ಸಂಬಳ ನೀಡುತ್ತಿಲ್ಲ. ನೀಡುತ್ತಿರುವ ಸಂಬಳಕ್ಕೆ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ.
ಕೊರೊನಾ ಬಂದ ನಂತರ ಗ್ರಾಮೀಣ ಪ್ರದೇಶಗಳಿಗೆ ಸರ್ವೆ ಮಾಡಲು ಹೋದರೆ ನಮ್ಮ ಮೇಲೆ ದೌರ್ಜನ್ಯ ನಡೆಯುತ್ತಿವೆ. ಹೀಗಿದ್ದರೂ ಸಹ ನಮ್ಮ ಕರ್ತವ್ಯವನ್ನು ನಾವು ಮುಂದುವರೆಸಿಕೊಂಡು ಬಂದಿದ್ದೇವೆ. ನಾವು ಮಾಡುತ್ತಿರುವ ಕಾರ್ಯಕ್ಕೆ ತಕ್ಕ ಪ್ರತಿಫಲ ದೊರೆಯುತ್ತಿಲ್ಲ ಎಂದು ವಿಷಾದಿಸಿದರು.