ತುಮಕೂರು:ಮನುಷ್ಯ ಬದುಕಲು ಜನ, ಜಲ, ಜಮೀನು, ಜಾನುವಾರು, ಜಂಗಲ್ ಎಂಬ ಜ ಅಕ್ಷರದ ಐದು ಅಂಶಗಳು ಬೇಕು. ಈ ಜ ಎಂಬ ಅಕ್ಷರದ ಪದಗಳು ಮನುಷ್ಯ ಬದುಕಲು ಬೇಕಿರುವ ಸರಪಳಿಯ ಹಾಗೆ ಎಂದು ಸಾವಯವ ಕೃಷಿ ಪರಿವಾರದ ಕಾರ್ಯಕರ್ತ ಅರುಣ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಭಾರತೀಯ ಕಿಸಾನ್ ಸಂಘ, ಕರ್ನಾಟಕ ದಕ್ಷಿಣ ಪ್ರಾಂತ ಸಾವಯವ ಕೃಷಿಕರ ಸಮ್ಮೇಳನವನ್ನು ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ಕೃಷಿಯಲ್ಲಿ ಬದಲಾವಣೆ ಕಾಣಬೇಕಿದೆ. ಕೃಷಿಯಲ್ಲಿ ರಾಸಾಯನಿಕ ಗೊಬ್ಬರ ಮತ್ತು ಸಿಂಪಡಿಸುವ ಔಷಧ ಕೇವಲ ಮಣ್ಣು ಮಾತ್ರ ಹಾಳುಮಾಡುವುದಿಲ್ಲ, ಅದರ ಸುತ್ತಮುತ್ತಲಿನ ಪರಿಸರವನ್ನು ಹಾಳು ಮಾಡುತ್ತದೆ. ಸಾವಯವ ಕೃಷಿಯಲ್ಲಿ ಹಣ ದೊರೆಯುವುದಿಲ್ಲ, ಆದರೆ ಆರೋಗ್ಯ ದೊರೆಯುತ್ತದೆ ಎಂದರು.