ತುಮಕೂರು:ರಾಜಕಾರಣ ಸಾರ್ವಜನಿಕರ ಸೇವೆ ಮಾಡುವ ಕ್ಷೇತ್ರ. ಅದು ಪಿತ್ರಾರ್ಜಿತ ಆಸ್ತಿಯಲ್ಲ. ಆದರೆ ಕುಮಾರಸ್ವಾಮಿ ಅವರ ಕುಟುಂಬ ರಾಜಕಾರಣ ಎಂದರೆ ಇಡೀ ಕರ್ನಾಟಕವೇ ಇವರ ಮನೆಯವರಿಗೆ ಸೇರಿದ್ದು ಎಂಬ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಕುಣಿಗಲ್ಲಿನಲ್ಲಿಂದು ವಿಧಾನಪರಿಷತ್ ಅಭ್ಯರ್ಥಿ ಆರ್. ರಾಜೇಂದ್ರ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಅಳುವುದರಲ್ಲಿ, ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ರಾಜಕಾರಣದಲ್ಲಿ ಏಕೆ ಅಳಬೇಕು. ನಮ್ಮನೆಲ್ಲಿ ಯಾರಾದರೂ ಮೃತಪಟ್ಟರೆ, ಕಷ್ಟ ಬಂದರೆ ಮಾತ್ರ ಅಳುತ್ತೇವೆ. ಜನ ಆಶೀರ್ವಾದ ಮಾಡಿದ್ರೆ ಅಧಿಕಾರ ಮಾಡಬೇಕು, ಇಲ್ಲದಿದ್ದರೆ ಮನೆಯಲ್ಲಿ ಕೂರಬೇಕು ಎಂದು ವ್ಯಂಗ್ಯವಾಡಿದರು.
ಕಳೆದ ಬಾರಿಯ ಚುನಾವಣೆಯಲ್ಲಿ ರಾಜ್ಯದ ಜನ ಯಾವ ಪಕ್ಷಕ್ಕೂ ಬಹುಮತ ಕೊಡಲಿಲ್ಲ. ಬಿಜೆಪಿ 104, ಕಾಂಗ್ರೆಸ್ 80, ಜೆಡಿಎಸ್ 36ಕ್ಕೆ ಬಂದಿತ್ತು. ಕೋಮುವಾದಿ ಪಕ್ಷವಾಗಿರೋ ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡಬೇಕೆಂದು ಜೆಡಿಎಸ್ ಕೇವಲ 36 ಗೆದ್ದಿದ್ದರೂ ಕೂಡ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಿದೆವು. ಕುಮಾರಸ್ವಾಮಿ ಮುಖ್ಯಮಂತ್ರಿ ಆದರು. ಆದರೆ ಅವರು ಕಾಂಗ್ರೆಸ್ ಎಂಎಲ್ಸಿ ಮತ್ತು ಮಂತ್ರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಇದ್ದುದರಿಂದ ಯಡಿಯೂರಪ್ಪ ಅವರು ಆಪರೇಷನ್ ಕಮಲ ಮಾಡಿ ಸಮ್ಮಿಶ್ರ ಸರ್ಕಾರ ಹೋಯಿತು ಎಂದು ಸಿದ್ದರಾಮಯ್ಯ ಟೀಕಿಸಿದರು.
ಕುಮಾರಸ್ವಾಮಿ 1 ವರ್ಷ 2 ತಿಂಗಳಲ್ಲೇ ಅಧಿಕಾರ ಕಳೆದುಕೊಂಡರು. ಈಗ ಸಿದ್ದರಾಮಯ್ಯನಿಂದ ಅಧಿಕಾರ ಕಳೆದುಕೊಂಡೆ ಎಂದು ಕುಮಾರಸ್ವಾಮಿ ಅಪಪ್ರಚಾರ ಮಾಡಿ ಸುಳ್ಳು ಹೇಳುತ್ತಿದ್ದಾರೆ ಎಂದರು.
ಇದನ್ನೂ ಓದಿ: ವಿದ್ಯಾರ್ಥಿಗಳೇ ಗಮನಿಸಿ: ಮಧ್ಯವಾರ್ಷಿಕ ಪರೀಕ್ಷೆಯ ಸಮಯ ಬದಲಾವಣೆ ಮಾಡಿದ ಪಿಯು ಬೋರ್ಡ್