ತುಮಕೂರು: ತಾಲ್ಲೂಕಿನ ಕೋರ ಹೋಬಳಿ ಕರಿಕೆರೆ ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲಿ ಧ್ವಜ ಸ್ತಂಭ ನೆಡುವ ವೇಳೆ, ಇಂದು ಬೆಳಗ್ಗೆ 7.45ರ ಸುಮಾರಿಗೆ ವಿದ್ಯುತ್ ಅವಘಡ ಸಂಭವಿಸಿತು. ಪರಿಣಾಮ, ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದಾನೆ. ಇಬ್ಬರು ಗಂಭೀರವಾಗಿ ಗಾಯಗೊಂಡರು.
ಧ್ವಜ ಸ್ತಂಭ ನೆಡುವಾಗ ವಿದ್ಯುತ್ ಸ್ಪರ್ಷಿಸಿ ವಿದ್ಯಾರ್ಥಿ ಸಾವು ಚಂದನ್ ಮೃತಪಟ್ಟ ವಿದ್ಯಾರ್ಥಿ. ಈತ ತನ್ನ ತಾತನ ಮನೆಯಾದ ಕರಿಕೆರೆ ಗ್ರಾಮದಲ್ಲಿ ವಾಸವಾಗಿದ್ದ. ಅಟವಿ ಸಿದ್ದಲಿಂಗೇಶ್ವರ ಪ್ರೌಢಶಾಲೆ ಚಿಕ್ಕತೊಟ್ಲುಕೆರೆ ಗ್ರಾಮದಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದ.
ಗಾಯಗೊಂಡಿರುವ ಶಶಾಂಕ್ ತುಮಕೂರಿನ ರೇಣುಕಾ ವಿದ್ಯಾಪೀಠದಲ್ಲಿ 10ನೇ ತರಗತಿ ಓದುತ್ತಿದ್ದಾನೆ. ಇನ್ನೋರ್ವ ಗಾಯಾಳು ಪವನ್ ಪಿಯುಸಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದು ತುಮಕೂರಿನ ಟ್ರ್ಯಾಕ್ಟರ್ ಶೋ ರೂಂನಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಗಾಯಗೊಂಡಿರುವ ಇಬ್ಬರನ್ನು ಶ್ರೀದೇವಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಹಲವು ದಿನಗಳಿಂದ ವಿದ್ಯುತ್ ತಂತಿ ಕೆಳಭಾಗದಲ್ಲಿ ಜೋತು ಬಿದ್ದಿತ್ತು. ಇದನ್ನು ಸರಿಪಡಿಸುವಂತೆ ಬೆಸ್ಕಾಂ ಇಲಾಖೆಗೆ ಶಿಕ್ಷಣ ಇಲಾಖೆ ವತಿಯಿಂದ ಮನವಿ ಮಾಡಲಾಗಿತ್ತು. ಆದರೆ ಬೆಸ್ಕಾಂ ಇಲಾಖೆ ನಿರ್ಲಕ್ಷ್ಯ ತೋರಿದೆ ಎಂದು ಆರೋಪಿಸಲಾಗಿದೆ. ಇದೇ ನಿರ್ಲಕ್ಷ್ಯ ಅವಘಡಕ್ಕೆ ಕಾರಣವಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ನಂಜಯ್ಯ ಹೇಳಿದರು.
ಶಿಕ್ಷಣ ಸಚಿವರ ಸಂತಾಪ:
ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ವಿದ್ಯಾರ್ಥಿ ಸಾವು ಪ್ರಕರಣಕ್ಕೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸಂತಾಪ ಸೂಚಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ತುಮಕೂರು ಜಿಲ್ಲೆ ಕರಿಕೆರೆ ಎಂಬಲ್ಲಿ ಶಾಲೆಯಲ್ಲಿ ಧ್ವಜಾರೋಹಣ ಮಾಡಲು ಕಂಬ ನೆಡುವಾಗ ವಿದ್ಯುತ್ ಸ್ಪರ್ಶದಿಂದ ಚಂದನ್ ಎಂಬ ವಿದ್ಯಾರ್ಥಿ ಸಾವಿಗೀಡಾಗಿದ್ದಾನೆ ಎಂಬ ಸುದ್ದಿ ತಿಳಿದು ಆಘಾತವಾಯಿತು. ಜೊತೆಗೆ ಪವನ್ ಮತ್ತು ಶಶಾಂಕ್ ಎಂಬ ಇನ್ನೂ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿಯಿತು. ಇದು ಅತ್ಯಂತ ದುರದೃಷ್ಟಕರ ಘಟನೆ ಎಂದಿದ್ದಾರೆ.
ಮೃತ ವಿದ್ಯಾರ್ಥಿಯ ಕುಟುಂಬಕ್ಕೆ ನನ್ನ ತೀವ್ರ ಸಂತಾಪಗಳನ್ನು ತಿಳಿಸಲು ಬಯಸುತ್ತೇನೆ. ಅವರ ದುಃಖ ಶಬ್ದಗಳಿಂದ ಶಮನ ಮಾಡಲು ಸಾಧ್ಯವಿಲ್ಲ. ಗಾಯಗೊಂಡ ವಿದ್ಯಾರ್ಥಿಗಳ ಚಿಕಿತ್ಸೆಗೆ ಕೊಡಲೇಬೇಕಾದ ಎಲ್ಲ ಸೌಲಭ್ಯಗಳನ್ನು ಒದಗಿಸುವಂತೆ ತಿಳಿಸಿದ್ದೇನೆ. ಈ ಘಟನೆಯ ಬಗ್ಗೆ ಜಿಲ್ಲಾಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದು ತನಿಖೆ ನಡೆಸಲು ಸೂಚಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.