ತುಮಕೂರು:ನಾಮಕರಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರ ಮೇಲೆ ಹೆಜ್ಜೇನು ದಾಳಿ ಮಾಡಿದ ಪರಿಣಾಮ ಓರ್ವ ಮೃತಪಟ್ಟು, 25ಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆ ಜಿಲ್ಲೆಯ ಗುಬ್ಬಿ ತಾಲೂಕಿನ ಲಕ್ಕೇನಹಳ್ಳಿ ಗೇಟ್ ಬಳಿ ನಡೆದಿದೆ. ನಾಮಕರಣ ಕಾರ್ಯಕ್ರಮ ಗ್ರಾಮದ ರಂಗನಾಥಸ್ವಾಮಿ ದೇವಾಲಯದ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ, ಹೆಜ್ಜೇನು ದಿಢೀರ್ ದಾಳಿ ಮಾಡಿವೆ. 47 ವರ್ಷದ ವೀರಭದ್ರಯ್ಯ ಎಂಬುವರು ಹೆಜ್ಜೇನು ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದರು. ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಹೆಜ್ಜೇನು ದಾಳಿಗೊಳಗಾದವರಿಗೆ ಗುಬ್ಬಿ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನಾಮಕರಣ ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭದಲ್ಲಿ ಸಮೀಪದ ಮರದಿಂದ ಹೆಜ್ಜೇನು ಎದ್ದಿವೆ. ಇದನ್ನು ಗಮನಿಸಿದ ಜನರು ದೇವಸ್ಥಾನದ ಒಳಗೆ ಸೇರಿಕೊಂಡು ಬಾಗಿಲು ಹಾಕಿಕೊಂಡಿದ್ದರು. ಸುಮಾರು ಒಂದು ಗಂಟೆ ಕಳೆದ ನಂತರ ಹೊರಗೆ ಬಂದ ಜನರ ಮೇಲೆ ಜೇನುನೊಣಗಳು ದಾಳಿ ಮಾಡಿವೆ. ಇದರಿಂದಾಗಿ ಜನರು ಗಂಭೀರವಾಗಿ ಗಾಯಗೊಂಡು, ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹೆಜ್ಜೇನು ದಾಳಿಗೆ ವ್ಯಕ್ತಿ ಸಾವು:ಇತ್ತೀಚಿಗೆ,ಶವಸಂಸ್ಕಾರಕ್ಕೆ ತೆರಳಿದ್ದ ವೇಳೆ ಸ್ಮಶಾನದ ಮರವೊಂದರಲ್ಲಿ ಗೂಡು ಕಟ್ಟಿದ್ದ ಹೆಜ್ಜೇನು ದಾಳಿ ನಡೆಸಿದ್ದರಿಂದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದ ಘಟನೆ ಚಾಮರಾಜನಗರದ ಹನೂರು ತಾಲೂಕಿನ ಕೊಂಗರಹಳ್ಳಿ ಗ್ರಾಮದಲ್ಲಿ ನಡೆದಿತ್ತು. ಗ್ರಾಮದ ಚೆನ್ನಪ್ಪ (60) ಸಾವಿಗೀಡಾದ್ದರು. ಹೆಜ್ಜೇನು ದಾಳಿಗೆ 14 ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು.