ಡಾ.ಜಿ.ಪರಮೇಶ್ವರ ಗೆದ್ದರೆ ನಾನು ಗೆದ್ದ ಹಾಗೆ ಎಂದ ಸಿದ್ದರಾಮಯ್ಯ. ತುಮಕೂರು :ನಾನು ಪರಮೇಶ್ವರ ಇಬ್ಬರು ಒಟ್ಟಿಗೆ ಕೆಲಸ ಮಾಡಿದ್ದೇವೆ. ನಿಮಗೆ ಒಂದು ಮಾತು ಹೇಳುತ್ತೇನೆ. ನಮ್ಮಿಬ್ಬರ ನಡುವೆ ಯಾವುದೇ ಒಂದು ಸಣ್ಣ ಭಿನ್ನಾಭಿಪ್ರಾಯ ಇಲ್ಲ. ಇಲ್ಲಿ ಡಾ ಜಿ ಪರಮೇಶ್ವರ ಗೆದ್ದರೆ ನನಗಾಗುವಷ್ಟು ಸಂತೋಷ ಬೇರೆ ಯಾರಿಗೂ ಆಗಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಕೊರಟಗೆರೆಯಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಅಭ್ಯರ್ಥಿ ಜಿ. ಪರಮೇಶ್ವರ್ ಪರವಾಗಿ ಮತಯಾಚಿಸುವಲ್ಲಿ ಸಂದರ್ಭದಲ್ಲಿ ಅವರು ಈ ಮಾತನ್ನಾಡಿದರು.
12 ವರ್ಷಗಳ ಕಾಲ ಬಹಳ ಅನ್ಯೋನ್ಯವಾಗಿ ನಾವು ಕೆಲಸ ಮಾಡಿದ್ದೇವೆ. ನಾನು ಮುಖ್ಯಮಂತ್ರಿಯಾದಾಗ ಅವರನ್ನು ಎಂಎಲ್‌ಸಿ ಮಾಡಿ ಹೋಮ್ ಮಿನಿಸ್ಟರ್ ಪೋಸ್ಟ್ ಕೊಟ್ಟಿದ್ದೆವು. ಅವರು ಒಬ್ಬ ಪ್ರಾಮಾಣಿಕ, ನಿಷ್ಠಾವಂತ ಬುದ್ಧಿವಂತ ರಾಜಕಾರಣಿ. ಅವರು ನನಗಿಂತ ಬುದ್ಧಿವಂತ ಎಂದರೆ ತಪ್ಪಾಗಲಾರದು. ಅದಕ್ಕೆ ಅವರನ್ನು ಕಾಂಗ್ರೆಸ್ ಪ್ರಣಾಳಿಕೆ ಸಮಿತಿ ಅಧ್ಯಕ್ಷರನ್ನಾಗಿ ಮಾಡಿದ್ದೇವೆ ಎಂದರು.
ಈಗಾಗಲೇ 5 ಗ್ಯಾರೆಂಟಿಗಳನ್ನು ಹೇಳಿದ್ದೇವೆ. ಇನ್ನು ಹೈದರಾಬಾದ್ ಕರ್ನಾಟಕ ಅಂದರೇ ಕಲ್ಯಾಣ ಕರ್ನಾಟಕ ಭಾಗದ ಕಲ್ಯಾಣ ಅಂಶಗಳಿವೆ. ಅದೇ ರೀತಿ ಚಿತ್ರದುರ್ಗದಲ್ಲಿ ನಡೆದ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿಚಾರಗಳು ಹಾಗು ಕಿತ್ತೂರು ಕರ್ನಾಟಕದ ಸಮಸ್ಯೆಗಳ ಬಗ್ಗೆ ಅಂಶಗಳನ್ನು ಸೇರಿಸಿದ್ದೇವೆ. ಇದನ್ನು ತಯಾರು ಮಾಡಿದ ಪರಮೇಶ್ವರ ಅವರಿಗೆ ಧನ್ಯವಾದ ಹೇಳಲಿಕ್ಕೆ ಬಯಸುತ್ತೇನೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಕಲ್ಲೇಟು ಬಿದ್ದ ವಿಚಾರ : ಯಾರೋ ಕಿಡಿಗೇಡಿಗಳು ಪರಮೇಶ್ವರ ಅವರಿಗೆ ಕಲ್ಲು ಬೀಸಿದ್ದಾರೆ. ಅವರು ಯಾರೋ ನಮ್ಮ ರಾಜಕೀಯ ವಿರೋದಿಗಳಿರಬೇಕು. ಅವರು ಸೋಲುವ ಹತಾಶೆಯಿಂದ ಇಂತಹ ಕೆಲಸ ಮಾಡಿದ್ದಾರೆ. ಪೂರ್ವದಲ್ಲಿ ಸೂರ್ಯ ಹುಟ್ಟೋದು ಎಷ್ಟು ಸತ್ಯವೋ ಪರಮೇಶ್ವರ ಅವರು ಗೆಲ್ಲೋದು ಅಷ್ಟೇ ಸತ್ಯ ಎಂದು ಗೆಲ್ಲುವ ವಿಶ್ವಾಸವನ್ನು ಸಿದ್ದರಾಮಯ್ಯ ವ್ಯಕ್ತಪಡಿಸಿದರು.
ಕರ್ನಾಟಕದಲ್ಲಿ ಅತ್ಯಂತ ಭ್ರಷ್ಟ ಸರ್ಕಾರಬವೆಂದರೆ ಬಿಜೆಪಿ. ಇಡೀ ದೇಶದಲ್ಲಿ ಇಂತ ಭ್ರಷ್ಟ ಸರ್ಕಾರ ಎಲ್ಲೂ ಇಲ್ಲ. ವಿಧಾನ ಸೌಧದಲ್ಲಿ ಗೋಡೆಗೆ ಕಿವಿಗೊಡಿ, ಏಕೆಂದರೆ ಅಲ್ಲಿ ಲಂಚ ಲಂಚ ಅಂತ ಕೇಳುತ್ತೆ. ಕೆಂಗಲ್ ಹನುಮಂತಯ್ಯ ವಿಧಾನ ಸೌಧದಲ್ಲಿ ಸರ್ಕಾರದ ಕೆಲಸ ದೇವರ ಕೆಲಸ ಅಂತ ಬರೆಸಿದ್ದಾರೆ. ಆದರೆ ಬಿಜೆಪಿ ಸರ್ಕಾರ ಬಂದು ಅಲ್ಲಿ ಭ್ರಷ್ಟಾಚಾರ ತಾಂಡವ ಆಡುವಂತೆ ಮಾಡಿದೆ ಎಂದು ಸಿದ್ದರಾಮಯ್ಯ, ಬಿಜೆಪಿ ವಿರುದ್ಧ ಕಿಡಿಕಾರಿದರು.
ಭ್ರಷ್ಟಾಚಾರ ಮಾಡಿ ರಾಜ್ಯದ 7 ಕೋಟಿ ಜನರಿಗೆ ಅವಮಾನ ಮಾಡಿದ್ದಾರೆ. ಹೆಚ್ಚೆಚ್ಚು ಸಾಲ ಪಡೆದು ರಾಜ್ಯದ ಪ್ರತಿಯೊಬ್ಬರ ಮೇಲೆ 76 ಸಾವಿರ ರೂಪಾಯಿ ಸಾಲ ಇರುವಂತೆ ಮಾಡಿದ್ದಾರೆ. ಇಂತವರು ಬಂದರೇ ರಾಜ್ಯ ಅಭಿವೃದ್ಧಿ ಮಾಡಲು ಹೇಗೆ ಸಾಧ್ಯ. ನಾನು ಮುಖ್ಯಮಂತ್ರಿಯಾದಾಗ 15 ಲಕ್ಷ ಮನೆ ಕಟ್ಟಿಸಿಕೊಟ್ಟಿದ್ದೆ. ನಾಲ್ಕು ವರ್ಷ ಆಗಿದೆ ಇವರು ಅಧಿಕಾರಕ್ಕೆ ಬಂದು. ಒಂದು ಮನೆನೂ ಕಟ್ಟಿ ಕೊಟ್ಟಿಲ್ಲ ಎಂದು ಸಿದ್ದರಾಮಯ್ಯ ಆರೋಪಿಸಿದರು.
ಇದನ್ನೂ ಓದಿ :ಕಾಂಗ್ರೆಸ್ ಜನರ ನಿಜವಾದ ಸಮಸ್ಯೆ ನಿವಾರಣೆಗೆ ಶ್ರಮಿಸುತ್ತದೆ: ಪಿ. ಚಿದಂಬರಂ