ತುಮಕೂರು: ಇಲ್ಲಿನ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಲತಾ ರವಿಕುಮಾರ್ ಅಧ್ಯಕ್ಷಗಾದಿಗೆ ಏರಿದಾಗಿನಿಂದಲೂ ಅವರ ವಿರುದ್ಧ ಎರಡನೇ ಬಾರಿಗೆ ಅವಿಶ್ವಾಸ ನಿರ್ಣಯ ಮಂಡಿಸಲು ವೇದಿಕೆ ಸಜ್ಜಾಗಿದೆ. ಇನ್ನೇನು ಅಧಿಕಾರಾವಧಿ ಪೂರ್ಣಗೊಳ್ಳಲು ಎರಡು ತಿಂಗಳು ಬಾಕಿ ಇರುವಾಗ ಮತ್ತೊಮ್ಮೆ ಬಿಜೆಪಿ ವತಿಯಿಂದ ಅವಿಶ್ವಾಸ ನಿರ್ಣಯ ಮಂಡಿಸಲಾಗುತ್ತಿದೆ.
57 ಮಂದಿ ಜಿಲ್ಲಾ ಪಂಚಾಯತ್ ಸದಸ್ಯರ ಬಲದಲ್ಲಿ 23 ಮಂದಿ ಕಾಂಗ್ರೆಸ್ ಸದಸ್ಯರಿದ್ದಾರೆ. 19 ಮಂದಿ ಬಿಜೆಪಿ ಸದಸ್ಯರಿದ್ದಾರೆ. ಉಳಿದಂತೆ 14 ಮಂದಿ ಜೆಡಿಎಸ್ ಸದಸ್ಯರು ಮತ್ತು ಓರ್ವ ಪಕ್ಷೇತರ ಸದಸ್ಯರಿದ್ದಾರೆ. 23 ಮಂದಿ ಕಾಂಗ್ರೆಸ್ ಸದಸ್ಯರಿಗೆ ಈಗಾಗಲೇ ಅವಿಶ್ವಾಸದ ವಿರುದ್ಧವಾಗಿ ಮತ ಚಲಾಯಿಸುವಂತೆ ವಿಪ್ ಜಾರಿ ಮಾಡಲಾಗಿದೆ. 19 ಬಿಜೆಪಿ ಸದಸ್ಯರಿಗೆ ಪಕ್ಷವು ಅವಿಶ್ವಾಸದ ಪರವಾಗಿ ಮತ ಚಲಾಯಿಸುವಂತೆ ಸೂಚನೆ ನೀಡಿದೆ. ಈವರೆಗೂ ನಿರಂತರವಾಗಿ 4 ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಗಳಿಗೆ ಗೈರು ಹಾಜರಾಗಿ ಕೋರಂ ಕೊರತೆಯಿಂದ ಸಭೆ ರದ್ದಾಗಿತ್ತು. ಅವಿಶ್ವಾಸ ನಿರ್ಣಯದಲ್ಲಿ ತಮಗೆ ಗೆಲುವು ಸಿಗಲಿದೆ ಎಂಬ ವಿಶ್ವಾಸ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಲತಾ ರವಿಕುಮಾರ್ ಅವರದ್ದಾಗಿದೆ.