ತುಮಕೂರು :ಸ್ಮಾರ್ಟ್ ಸಿಟಿಯಾಗಿ ಘೋಷಣೆಯಾಗಿ ವರ್ಷಗಳೇ ಕಳೆದಿದೆ. ಆದರೆ, ನಗರದಲ್ಲಿ ಯಾವುದೂ ಸ್ಮಾರ್ಟ್ ಆಗೇ ಇಲ್ಲ. ಸದ್ಯ ನಗರವನ್ನು ಸ್ವಚ್ಛವಾಗಿಡಲು ಮುಂದಾಗಿರುವ ಮಹಾನಗರ ಪಾಲಿಕೆ ವಿನೂತನ ಯಂತ್ರದ ಮೂಲಕ ಕಸದ ಸಮಸ್ಯೆಗೆ ಮುಕ್ತಿ ಹಾಡಲು ಮುಂದಾಗಿದೆ.
ನಗರದಲ್ಲಿ ಸ್ಮಾರ್ಟ್ ಸಿಟಿಗೆ ತಕ್ಕಂತೆ ಕೆಲಸಗಳು ಮಾತ್ರ ನಡೆಯುತ್ತಿಲ್ಲ ಎಂಬ ಅಸಮಾಧಾನ ಸಾರ್ವಜನಿಕರಲ್ಲಿ ಮನೆ ಮಾಡಿದೆ. ಅದರಲ್ಲೂ ಕಸ ಹಾಗೂ ಧೂಳಿನ ಸಮಸ್ಯೆಯಿಂದ ವಾಹನ ಸವಾರರು ಅಧಿಕಾರಿಗಳ ವಿರುದ್ಧ ಶಾಪ ಹಾಕುವುದು ಕಡಿಮೆಯಾಗಿಲ್ಲ. ಹಾಗಾಗಿ ನಗರದಲ್ಲಿರುವ ಕಸದ ಸಮಸ್ಯೆಗೆ ಮುಕ್ತಿ ನೀಡಲು ಮಹಾನಗರ ಪಾಲಿಕೆ ವಿನೂತನವಾದ ಯಂತ್ರದ ಪ್ರಾಯೋಗಿಕ ಪ್ರದರ್ಶನವನ್ನು ಇಂದು ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗ ನಡೆಸಿತು.
ಕಲ್ಪತರು ನಾಡಿಗೆ ಬಂತು ಕಸ ಗುಡಿಸೋ ಯಂತ್ರ ನಗರವನ್ನು ಸ್ವಚ್ಛವಾಗಿಡುವಲ್ಲಿ ಮೂರು ಯಂತ್ರಗಳ ಕೆಲಸವನ್ನು ಇದೊಂದೇ ಯಂತ್ರ ನಿರ್ವಹಿಸುತ್ತದೆ, ಅಲ್ಲದೆ ಬೇರೆ ಮಷಿನ್ಗಳಿಗೆ 20 ಲೀಟರ್ ಡಿಸೇಲ್ನಲ್ಲಿ ಮಾಡುವ ಕಾರ್ಯ ಕೇವಲ 5 ಲೀಟರ್ನಲ್ಲಿ ಮಾಡಿ ಮುಗಿಸುತ್ತದೆ. ಇದರ ವೆಚ್ಚ ಬರೋಬರಿ 1 ಕೋಟಿಯಿಂದ 2 ಕೋಟಿಯವರೆಗೂ ಇದೆಯಂದು ಸಂಸ್ಥೆಯ ಅಧ್ಯಕ್ಷ ಓಂ ಪ್ರಕಾಶ್ ತಿಳಿಸಿದರು.
ಇದೇ ವೇಳೆ ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್ ಕುಮಾರ್, ಶಾಸಕ ಜ್ಯೋತಿಗಣೇಶ್, ಮಹಾನಗರ ಪಾಲಿಕೆಯ ಮೇಯರ್ ಲಲಿತಾ ರವೀಶ್ ಹಾಗೂ ಸ್ಮಾರ್ಟ್ ಸಿಟಿ ಅಧಿಕಾರಿಗಳು ಹಾಜರಿದ್ದರು. ಈಗಾಗಲೇ ದೆಹಲಿ, ಬೆಂಗಳೂರು, ಜೈಪುರ, ಹೈದರಾಬಾದ್ ಸೇರಿದಂತೆ ಮಹಾನಗರಗಳಲ್ಲಿ ಈ ಯಂತ್ರ ಕಾರ್ಯನಿರ್ವಹಿಸುತ್ತಿದ್ದು, ಇದೀಗ ತುಮಕೂರಿಗೆ ಆಗಮಿಸಿದೆ. ಮುಂದಿನ ದಿನಗಳಲ್ಲಿ ನಗರವನ್ನು ಸ್ವಚ್ಛವಾಗಿಡುವ ಮೂಲಕ ಕಸ ಹಾಗೂ ಧೂಳಿನಿಂದ ತುಮಕೂರು ನಗರ ಬದಲಾಗುವುದಾ ಕಾದು ನೋಡಬೇಕಿದೆ.