ತುಮಕೂರು:ಆಟೋ ಚಾಲಕರು ಕಾನೂನು ಸುರಕ್ಷತೆ ನಿಯಮ ಮತ್ತು ಕರ್ತವ್ಯವನ್ನು ಪಾಲಿಸಬೇಕು ಎಂದು ರಾಮಕೃಷ್ಣ ಸೇವಾಶ್ರಮದ ಜಪಾನಂದ ಸ್ವಾಮೀಜಿ ತಿಳಿಸಿದರು.
ಪಾವಗಡದ ಆರ್.ಎಂ.ಸಿ ಆವರಣದಲ್ಲಿ ಆಟೋ ಚಾಲಕರ ಕಲ್ಯಾಣ ಜಂಟಿ ಕ್ರಿಯಾ ಸಮಿತಿ ಹಾಗೂ ಪಾವಗಡ ಮೋಟಾರ್ ಡ್ರೈವಿಂಗ್ ಸ್ಕೂಲ್ ಸಮೂಹದಡಿಯಲ್ಲಿ ಏರ್ಪಡಿಸಿದ್ದ 32 ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆಯನ್ನ ಉದ್ಘಾಟಿಸಿ ಅವರು ಮಾತನಾಡಿದರು.
ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಇತ್ತೀಚೆಗೆ ಕೆಲ ಆಟೋ ಚಾಲಕರು ಹಾಗೂ ವಾಹನ ಚಾಲಕರು ಕಾನೂನು ನಿಯಮಗಳನ್ನು ಉಲ್ಲಂಘಿಸುವ ಪ್ರಕರಣಗಳು ಮೇಲಿಂದ ಮೇಲೆ ನಡೆಯುತ್ತಿವೆ. ಇದರಿಂದ ಅಪಘಾತ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಅದರಲ್ಲೂ ಹದಿನೆಂಟು ವರ್ಷದೊಳಗಿನ ಮಕ್ಕಳು ಕಾನೂನು ಬಾಹಿರವಾಗಿ ವಾಹನ ಚಲಾಯಿಸುವುದಲ್ಲದೇ ವೀಲಿಂಗ್ ಮಾಡುತ್ತಾ ಕಿರಿ ಕಿರಿ ಉಂಟು ಮಾಡುತ್ತಿರುವುದು ದುರಂತ ಎಂದರು.
ಚಾಲಕರು ಬೇಜವಾಬ್ದಾರಿತನ ಬಿಟ್ಟು ಕಾನೂನು ನಿಯಮಗಳನ್ನು ಪಾಲಿಸಿ ನಾಗರೀಕತೆ ಮೈಗೂಡಿಸಿಕೊಂಡು ಸಂಘಟಿತರಾಗಿ ಎಂದು ಸಲಹೆ ನೀಡಿದರು.
ಮಧುಗಿರಿ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಎ. ವಿವೇಕಾನಂದ ಮಾತನಾಡಿ, ಪ್ರತಿಯೊಬ್ಬ ಚಾಲಕರು ರಸ್ತೆ ಸುರಕ್ಷತಾ ಶಿಕ್ಷಣ ಪಡೆದು ವಾಹನ ಚಲಾಯಿಸಬೇಕು. ಮಾನವೀಯತೆ ದೃಷ್ಠಿಯಿಂದ ನಿಮ್ಮ ವಾಹನ ದಾಖಲೆಗಳ ಲೋಪದೋಷಗಳನ್ನು ಸರಿಪಡಿಸಿಕೊಳ್ಳುವಂತೆ ಮಾರ್ಗದರ್ಶನ ನೀಡುತ್ತಿದ್ದೇವೆ. ಅದನ್ನು ಪಾಲಿಸಬೇಕು ಎಂದು ತಿಳಿಸಿದರು.