ತುಮಕೂರು: ದೆಹಲಿಯಲ್ಲಿ ಕೃಷಿ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ 'ಖಲಿಸ್ತಾನ್ ಜಿಂದಾಬಾದ್' ಎನ್ನುವವರು ಹಣ ಕೊಟ್ಟು ಪ್ರತಿಭಟನೆಗೆ ಜನರನ್ನು ಕಳಿಸುವ ದೊಡ್ಡ ಕಮಿಷನ್ ಏಜೆಂಟ್ಗಳು ಹಾಗೂ ಮದಲೀಸ್ಗಳಿದ್ದಾರೆ ಎಂದು ಸಂಸದ ಜಿ.ಎಸ್.ಬಸವರಾಜ್ ಆಕ್ರೋಶ ವ್ಯಕ್ತಪಡಿಸಿದರು.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ದೇಶವನ್ನು ತುಂಡು ತುಂಡು ಮಾಡುವವರು ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ. ರಾಹುಲ್ ಗಾಂಧಿಗೆ ಬುದ್ಧಿ ಇಲ್ಲ. ಪ್ರಧಾನಮಂತ್ರಿ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಏನೇನೋ ಮಾತನಾಡುತ್ತಾರೆ ಎಂದು ವ್ಯಂಗ್ಯವಾಡಿದರು.
ರೈತ ತಾನು ಬೆಳೆದ ಬೆಳೆಗಳನ್ನು ಎಪಿಎಂಸಿಗೆ ಮಾರಾಟಕ್ಕೆ ತರುವ ವೇಳೆಗೆ ಕಮಿಷನ್ ಏಜೆಂಟ್ಗಳು ಸೇರಿದಂತೆ ಅನೇಕರು ತಿನ್ನುತ್ತಾರೆ. ಎಪಿಎಂಸಿಗೆ ತಂದು ಮಾರಾಟ ಮಾಡುವಂತಹ ಸಾಮರ್ಥ್ಯವುಳ್ಳವರು ಮಾರಾಟ ಮಾಡಲಿ. ಅದಕ್ಕೆ ಯಾವುದೇ ರೀತಿಯ ಅಡ್ಡಿಪಡಿಸಿಲ್ಲ. ಪಂಜಾಬ್ ಹಾಗೂ ಹರಿಯಾಣ ಭಾಗದಲ್ಲಿ ಒಬ್ಬೊಬ್ಬ ಕಮಿಷನ್ ಏಜೆಂಟ್ಗಳು ಒಂದು ರೀತಿಯ ಖದೀಮರು. ರೈತರಿಂದ ಕಡಿಮೆ ಬೆಲೆಗೆ ಅಪಾರ ಪ್ರಮಾಣದಲ್ಲಿ ಖರೀದಿ ಮಾಡಿ ನೇರವಾಗಿ ಎಫ್ಸಿಐಗೆ ಮಾರಾಟ ಮಾಡುತ್ತಾರೆ.
ಮೊದಲಿಗೆ ರೈತ ಕಡ್ಡಾಯವಾಗಿ ಎಪಿಎಂಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಬೇಕೆಂದು ಸೂಚಿಸಲಾಗಿತ್ತು. ಆದರೆ ಇದೀಗ ಆತನಿಗೆ ಸ್ವಾತಂತ್ರ್ಯ ನೀಡಲಾಗಿದ್ದು, ಎಲ್ಲಿ ಬೇಕಾದರೂ ಮಾರಾಟ ಮಾಡಬಹುದಾಗಿದೆ. ರೈತರು ತಮ್ಮ ಉತ್ಪಾದನೆಯನ್ನು ಸಂರಕ್ಷಣೆ ಮಾಡಲು ವ್ಯವಸ್ಥೆ ಕಲ್ಪಿಸಿಕೊಡಲಾಗಿದೆ. ನೂತನ ಕೃಷಿ ಕಾಯ್ದೆಗಳಿಂದ ರೈತನಿಗೆ ಸಹಕಾರಿಯಾಗಲಿದೆ ಎಂದು ಸಂಸದ ಬಸವರಾಜ್ ಹೇಳಿದರು.