ತುಮಕೂರು: ಇಲ್ಲಿನ ಲೋಕಸಭೆ ಕ್ಷೇತ್ರದಲ್ಲಿ ಪ್ರಧಾನಿ ಮೋದಿ ಅಲೆ ಎದ್ದಿದೆ. ದೇಶ ರಕ್ಷಣೆಗೆ ಪಣ ತೊಟ್ಟಿರುವ, ಬಡವರ ಅಭ್ಯುದಯಕ್ಕಾಗಿ ಶ್ರಮಿಸುತ್ತಿರುವ ಮೋದಿ ಅವರನ್ನು ಗ್ರಾಮೀಣ ಭಾಗದ ಮತದಾರರು ನೆನೆಸಿಕೊಳ್ಳುತ್ತಿದ್ದು, ಕ್ಷೇತ್ರದಲ್ಲಿ ಮೋದಿ ಪರ ಅಲೆ ಇದೆ ಎಂದು ಬಿಜೆಪಿ ಅಭ್ಯರ್ಥಿ ಜಿ .ಎಸ್.ಬಸವರಾಜ್ ಹೇಳಿದ್ದಾರೆ.
ಬಿಜೆಪಿ ಅಭ್ಯರ್ಥಿ ಜಿ .ಎಸ್.ಬಸವರಾಜ್ ಈಟಿವಿ ಭಾರತ್ ಜೊತೆ ಮಾತನಾಡಿದ ಅವರು, ಮತದಾರರು ಮತ್ತು ನಮ್ಮ ನಡುವೆ ಇರುವ ಅವಿನಾಭಾವ ಸಂಬಂಧದಿಂದ ನಾನು ಚುನಾವಣೆಗೆ ಹೋಗುತ್ತಿದ್ದೇನೆ. ನನ್ನ ಎದುರಾಳಿ ಯಾರೆಂಬುದನ್ನು ಪರಿಗಣಿಸುವುದಿಲ್ಲ. ಮೋದಿ ಪರವಾದ ಅಲೆ ಮತ್ತು ನನ್ನ ವೈಯಕ್ತಿಕ ವರ್ಚಸ್ಸು ನನ್ನ ಗೆಲುವಿಗೆ ಸಹಕಾರಿ ಆಗಲಿದೆ ಎಂದರು.
ಕ್ಷೇತ್ರದಲ್ಲಿ ನಾನು ಸೋತರೂ, ಗೆದ್ದರೂ ಸಂಸದ ಎಂದು ಪರಿಗಣಿಸುತ್ತಿದ್ದು, ಮತದಾರರು ನನ್ನ ಮೇಲೆ ಇರಿಸಿರುವ ವಿಶ್ವಾಸವೇ ನನಗೆ ಶ್ರೀರಕ್ಷೆಯಾಗಿದೆ. ಜೆಡಿಎಸ್ ಜೊತೆ ಕಾಂಗ್ರೆಸ್ ಮೈತ್ರಿ ಇದ್ದರೂ ಕ್ಷೇತ್ರದಲ್ಲಿ ಹೊಂದಾಣಿಕೆಯಿಲ್ಲ. ಹೀಗಾಗಿ ನಾವು ನೇರವಾಗಿ ಚುನಾವಣೆ ಎದುರಿಸುತ್ತಿರುವುದು ಕಾಂಗ್ರೆಸ್ ಜೊತೆ ಅಲ್ಲ, ಬದಲಾಗಿ ಜೆಡಿಎಸ್ ಜೊತೆ ಎಂದರು.
ತುಮಕೂರು ಜಿಲ್ಲೆಗೆ ಹೇಮಾವತಿ ಕುಡಿಯುವ ನೀರು ಹರಿಸುವ ಕುರಿತಂತೆ ದೇವೇಗೌಡರ ಕುಟುಂಬ ಸಾಕಷ್ಟು ಅನ್ಯಾಯ ಮಾಡುತ್ತಲೇ ಬಂದಿದೆ ಎಂಬ ನೋವು ಜಿಲ್ಲೆಯ ಜನರಲ್ಲಿದೆ. ಹೇಮಾವತಿ ನೀರಾವರಿ ಸಲಹಾ ಸಮಿತಿ ಸಭೆ ಅಧ್ಯಕ್ಷರಾದ ನಂತರ ಸಭೆಗಳಲ್ಲಿ ಅಧಿಕಾರಿಗಳಿಗೆ ಬೆದರಿಕೆ ಹಾಕಿ ನೀರು ಹರಿಸಿರುವುದಾಗಿ ಸುಳ್ಳು ಹೇಳಿಸುತ್ತಿದ್ರು. ಹೀಗೆ ತುಮಕೂರು ಜಿಲ್ಲೆಯ ಜನರಿಗೆ ಅನ್ಯಾಯ ಮಾಡಿದ್ದಾರೆ. ಇದು ಮತದಾರರ ಮನದಲ್ಲಿದೆ ಎಂದು ಬಸವರಾಜ್ ಹೇಳಿದರು.