ತುಮಕೂರು:ಅತ್ತ ಬೆಂಗಳೂರಿನಲ್ಲಿ ಸಾಕಷ್ಟು ಕ್ಷಿಪ್ರ ರಾಜಕೀಯ ಬೆಳವಣಿಗೆಗಳು ನಡೆಯುತ್ತಿದ್ದರೆ, ಇತ್ತ ತುಮಕೂರಿನಲ್ಲಿ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಮಾತ್ರ ಕೂಲ್ ಆಗಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ವೀಕ್ಷಣೆ ಮಾಡುವುದರಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು ಗಮನಾರ್ಹವಾಗಿತ್ತು.
ಅತ್ತ ಮೈತ್ರಿ ಸರ್ಕಾರದಲ್ಲಿ ಆತಂಕ... ಇತ್ತ ಕೂಲ್ ಆಗಿ ಕಾಮಗಾರಿ ಪರಿಶೀಲಿಸಿದ ಖಾದರ್ - undefined
ಬೆಂಗಳೂರಿನ ರಾಜಕೀಯ ಚಟುವಟಿಕೆ ಬಗ್ಗೆ ತಲೆಕೆಡಿಸಿಕೊಳ್ಳದ ಸಚಿವ ಯು.ಟಿ.ಖಾದರ್, ತುಮಕೂರಿನಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಫುಲ್ ಬ್ಯುಸಿಯಾಗಿದ್ದಾರೆ.
ಬೆಳಗ್ಗೆ ತುಮಕೂರಿಗೆ ಆಗಮಿಸಿದ ಸಚಿವ ಖಾದರ್ ಮೊದಲಿಗೆ ಉದ್ಯಾನವನಗಳ ಅಭಿವೃದ್ಧಿ ಕಾಮಗಾರಿ, ವರ್ತುಲ ರಸ್ತೆ ಕಾಮಗಾರಿ, ಬಾರ್ ಲೈನ್ ರಸ್ತೆ ಕಾಮಗಾರಿ, ವೆಡ್ಡಿಂಗ್ ಜೋನ್, ಅಲ್ಲದೆ ಬುಗುಡನಹಳ್ಳಿ ಕೆರೆ ಸಮೀಪ ತುಮಕೂರು ನಗರಕ್ಕೆ ಹರಿಯುವಂತಹ ನೀರಿನ ವ್ಯವಸ್ಥೆಯ ಪರಿಶೀಲನೆ ನಡೆಸಿದರು. ಅಲ್ಲದೇ ಅಧಿಕಾರಿಗಳೊಂದಿಗೆ ತುಮಕೂರು ನಗರದ ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿರುವ ಕುರಿತು ಮಾಹಿತಿ ಪಡೆದರು.
ನಂತರ ತುಮಕೂರು ಮಹಾನಗರ ಪಾಲಿಕೆಯಲ್ಲಿ ಸಾರ್ವಜನಿಕರಿಂದ ದೂರು ಆಲಿಸಿದರು. ಇನ್ನೊಂದೆಡೆ ತುಮಕೂರು ನಗರದ ಎಂಪ್ರೆಸ್ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಸ್ಮಾರ್ಟ್ ಸಿಟಿ ಯೋಜನೆ ವತಿಯಿಂದ ಅನುಷ್ಠಾನಕ್ಕೆ ತರಲಾಗುತ್ತಿರುವ ಸ್ಮಾರ್ಟ್ ಕ್ಲಾಸ್ ರೂಮ್ಗಳಲ್ಲಿ ಪಾಠ ಪ್ರವಚನಕ್ಕೆ ಅಣಿಯಾಗುತ್ತಿರುವ ಶಿಕ್ಷಕರೊಂದಿಗೆ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದರು. ಅಲ್ಲದೆ ಭವಿಷ್ಯದ ಪ್ರಜೆಗಳನ್ನು ರೂಪಿಸುವ ಜವಾಬ್ದಾರಿ ನಿಮ್ಮಗಳ ಮೇಲಿದೆ. ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡು ವಿದ್ಯಾರ್ಥಿಗಳಿಗೆ ಬೋಧಿಸುವ ಮೂಲಕ ಉತ್ತಮ ಶಿಕ್ಷಕರಾಗಿ ರೂಪುಗೊಳ್ಳಬೇಕೆಂದು ಕರೆ ನೀಡಿದರು.