ತುಮಕೂರು:ಮಧುಗಿರಿ ಶಾಸಕ ವೀರಭದ್ರಯ್ಯ ತಮ್ಮ ಮಗನ ವಯಸ್ಸಿನ ಸಂಸದ ಪ್ರಜ್ವಲ್ ರೇವಣ್ಣ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆಗಿದೆ. ಇಲ್ಲಿನ ಶಿರಾ ತಾಲೂಕಿನ ಬೂವನಹಳ್ಳಿಗೆ ಆಗಮಿಸಿದ್ದ ವೇಳೆ ವೀರಭದ್ರಯ್ಯ ಸಂಸದರ ಕಾಲಿಗೆರಗಿದ್ದಾರೆ ಎನ್ನಲಾಗುತ್ತಿದೆ.
ಇತ್ತೀಚಿಗೆ ನಿಧನರಾದ ಶಿರಾ ಶಾಸಕ ಸತ್ಯನಾರಾಯಣ ಅವರ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಂಸದ ಪ್ರಜ್ವಲ್ ರೇವಣ್ಣ ಆಗಮಿಸಿದ್ದರು. ಅವರು ಸ್ಥಳಕ್ಕೆ ಬರುತ್ತಿದ್ದಂತೆ ಅಲ್ಲಿಯೇ ಶಾಸಕ ವೀರಭದ್ರಯ್ಯ ಏಕಾಏಕಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದಂತೆ ವಿಡಿಯೋದಲ್ಲಿ ಕಂಡುಬಂದಿದೆ.
ಈ ವೇಳೆ ಸ್ಥಳದಲ್ಲಿದ್ದ ಕೆಲವರು ಇದನ್ನು ಕಂಡು ಕೆಲಕಾಲ ಅವಕ್ಕಾದರು. ನಿವೃತ್ತ ಐಎಎಸ್ ಅಧಿಕಾರಿಯಾಗಿರುವ ಮಧುಗಿರಿ ಶಾಸಕ ವೀರಭದ್ರಯ್ಯ ಕಾಲಿಗೆ ಬಿದ್ದ ವಿಡಿಯೋ ಈಗ ಎಲ್ಲೆಡೆ ಹರಿದಾಡುತ್ತಿದೆ.
ಸಂಸದ ಪ್ರಜ್ವಲ್ ರೇವಣ್ಣರ ಕಾಲಿಗೆರಗಿದ ಶಾಸಕ ವೀರಭದ್ರಯ್ಯ! ಪ್ರಜ್ವಲ್ ರೇವಣ್ಣ ಸ್ಪಷ್ಟನೆ:
ಈ ಕುರಿತಂತೆ ಸ್ಪಷ್ಟನೆ ನೀಡಿರುವ ಸಂಸದ ಪ್ರಜ್ವಲ್ ರೇವಣ್ಣ, ಶಾಸಕ ವೀರಭದ್ರಯ್ಯ ಹಿರಿಯರು. ನಾನೇ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆಯಲು ಹೋದ ಸಂದರ್ಭದಲ್ಲಿ ಅವರು ನನ್ನನ್ನು ಮೇಲಕ್ಕೆತ್ತಿದರು. ಆದರೆ ವೈರಲ್ ಆಗಿರುವ ವಿಡಿಯೋದಲ್ಲಿ ಅದನ್ನು ತಿರುಚಲಾಗಿದೆ ಎಂದು ಹೇಳಿದ್ದಾರೆ. ಕೆಲವೊಂದು ರಾಜಕೀಯ ಉದ್ದೇಶದಿಂದ ಈ ರೀತಿ ಮಾಡಿರುವ ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ.