ತುಮಕೂರು: ಇತ್ತೀಚೆಗೆ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ವಿಪ್ ಉಲ್ಲಂಘಿಸಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್ ಡಿ ಕುಮಾರಸ್ವಾಮಿಗೆ ಬಹಿರಂಗವಾಗಿಯೇ ಸವಾಲು ಹಾಕಿದ್ದ ಗುಬ್ಬಿ ಕ್ಷೇತ್ರದ ಶಾಸಕ ಶ್ರೀನಿವಾಸ್ ಇದೀಗ ವಿಧಾನ ಪರಿಷತ್ ಸದಸ್ಯ ಶರವಣ ವಿರುದ್ಧ ಹರಿಹಾಯ್ದಿದ್ದಾರೆ. ಅಲ್ಲೆಲ್ಲೋ ಹೆಣ್ಣು ಮಕ್ಕಳಿಗೆ ಚಿನ್ನದ ಚೈನ್ ಕೊಟ್ಟು ಎಂಎಲ್ಸಿ ಆಗಿರುವ ಶರವಣನಿಗೆ ಒಂದು ಗ್ರಾಮ ಪಂಚಾಯತ್ ಚುನಾವಣೆಗೆ ನಿಂತು ಗೆಲ್ಲುವ ಯೋಗ್ಯತೆ ಇಲ್ಲ ಎಂದು ಶಾಸಕ ಶ್ರೀನಿವಾಸ್ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿಂದು ಮಾತನಾಡಿದ ಅವರು, ಶರವಣ ವಾಸ ಮಾಡುತ್ತಿರುವ ಬಸವನಗುಡಿ ವಿಧಾನಸಭಾ ಕ್ಷೇತ್ರದಲ್ಲಿ ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರಲಿ. ಚಿನ್ನ ಕೊಟ್ಟು ಅಧಿಕಾರಕ್ಕೆ ಬರುವವರು, ಎಂತೆಂಥವರೋ ಪಕ್ಷದ ಬಗ್ಗೆ ಮಾತನಾಡುತ್ತಿದ್ದಾರೆ ಎಂದರೆ ಇದು ಪಕ್ಷದ ದೌರ್ಬಲ್ಯವಾಗಿದೆ. ಚಿನ್ನ ಕೊಟ್ಟು ಅಧಿಕಾರ ಹಿಡಿಯುವ ಶರವಣ ಏನು ರೈತನೇ, ಜೆಡಿಎಸ್ ರೈತರ ಪಕ್ಷವೇ ಎಂದು ಪ್ರಶ್ನಿಸಿದರು.