ತುಮಕೂರು: ಮಂಡಿ ನೋವಿನಿಂದ ಬಳಲುತ್ತಿದ್ದ ಅಂತರರಾಷ್ಟ್ರೀಯ ರಗ್ಬಿ (ಅಮೆರಿಕನ್ ಫುಟ್‌ಬಾಲ್) ಕ್ರೀಡಾಪಟುವಿಗೆ ವೈದ್ಯರೂ ಆಗಿರುವ ಕುಣಿಗಲ್ ಶಾಸಕ ಡಾ.ಹೆಚ್.ಡಿ.ರಂಗನಾಥ್ ತಮ್ಮ ಸಹೋದ್ಯೋಗಿ ವೈದ್ಯರೊಂದಿಗೆ ಸೇರಿ ಮಂಡಿ ಯಶಸ್ವಿ ಶಸ್ತ್ರಚಿಕಿತ್ಸೆ ನೆರವೇರಿಸಿದರು.
ಮೂಲತಃ ಕುಣಿಗಲ್ ತಾಲೂಕಿನ ಹುತ್ತಿದುರ್ಗ ಯಲಿಯೂರು ಗ್ರಾಮದ, ಹಾಲಿ ಬೆಂಗಳೂರಿನ ಟೆಂಪೋ ಚಾಲಕ ರಂಗಸ್ವಾಮಿ ಅವರ ಪುತ್ರಿ ಆರ್. ಭವ್ಯ ರಗ್ಬಿ ಕ್ರೀಡಾಪಟು ಆಗಿದ್ದಾರೆ. ಕಳೆದ ಆರು ತಿಂಗಳ ಹಿಂದೆ ಅಭ್ಯಾಸದ ವೇಳೆ ಬಿದ್ದು ಬಲಭಾಗದ ಮಂಡಿಗೆ ಗಾಯವಾಗಿತ್ತು. ಭವ್ಯ ಅವರಿಗೆ ಬೆಂಗಳೂರಿನ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಶನಿವಾರ ಶಾಸಕ ಡಾ.ಹೆಚ್.ರಂಗನಾಥ್, ಡಾ. ಸಚಿನ್ ಗೌಡ, ಡಾ.ಶಿವರಾಜ್ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದರು.
ಆರ್.ಭವ್ಯ ಬಡ ಕುಟುಂಬದ ವಿದ್ಯಾರ್ಥಿನಿಯಾಗಿದ್ದಾರೆ. ಬೆಂಗಳೂರಿನ ಬಿಎಂಎಸ್ ಕಾಲೇಜಿನಲ್ಲಿ ದ್ವಿತೀಯ ಬಿ.ಎ.ಸೈಕಾಲಜಿ ಅಭ್ಯಾಸ ಮಾಡಿದ್ದು, ಜತೆಗೆ ರಗ್ಬಿ ತರಬೇತಿ ಪಡೆದು ಉತ್ತಮ ಕ್ರೀಡಾಪಟು ಆಗಿದ್ದರು. ಚೆನ್ನೈ, ಮಹಾರಾಷ್ಟ್ರ, ಪಂಜಾಬ್, ಒಡಿಶಾ ಮೊದಲಾದ ರಾಜ್ಯಗಳಲ್ಲಿ ಆಟವಾಡಿ ತಮ್ಮ ಕಾಲೇಜು ಹಾಗೂ ಕುಣಿಗಲ್ ತಾಲೂಕಿಗೆ ಕೀರ್ತಿ ತಂದಿದ್ದರು. ಚೆನ್ನೈನಲ್ಲಿ ಕಳೆದ ಆರು ತಿಂಗಳ ಹಿಂದೆ ಮಂಡಿ ನೋವು ಕಡಿಮೆಯಾಗಿ ಸ್ವಲ್ಪ ದಿನದ ನಂತರ ಮತ್ತೆ ಆಟ ಅಭ್ಯಾಸ ಪ್ರಾರಂಭಿಸಿದ್ದರು.