ತುಮಕೂರು:ಮಾಜಿ ಶಾಸಕ ಚೆಲುವರಾಯಸ್ವಾಮಿ ಅವರಿಗೆ ಮಾಡಲು ಕೆಲಸವಿಲ್ಲ. ಅದಕ್ಕೆ ಅವಕಾಶ ಸಿಕ್ಕಾಗಲೆಲ್ಲ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧ ಹೇಳಿಕೆ ನೀಡುವ ಮೂಲಕ ಬಾಯ್ಚಟ ತೀರಿಸಿಕೊಳ್ಳುತ್ತಿದ್ದಾರೆ ಎಂದು ತುಮಕೂರು ಗ್ರಾಮಾಂತರ ಶಾಸಕ ಡಿ. ಸಿ. ಗೌರಿಶಂಕರ್ ಹರಿಹಾಯ್ದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಗೌರಿಶಂಕರ್ ತಮ್ಮ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಸಿದ್ಧಗಂಗಾ ಮಠಕ್ಕೆ ಆಗಮಿಸಿ ಸ್ವಾಮೀಜಿಯವರ ಆಶೀರ್ವಾದ ಪಡೆದ ನಂತರ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯಿಸಿದರು. 2013ರ ವಿಧಾನಸಭಾ ಚುನಾವಣೆಯಲ್ಲಿ ಚೆನ್ನಿಗಪ್ಪ ಹಾಗೂ ನಾನು ಸೋಲಲು ಚೆಲುವರಾಯಸ್ವಾಮಿ ಅವರೇ ಕಾರಣರಾಗಿದ್ದರು. ಜೆಡಿಎಸ್ ಟಿಕೆಟ್ ಪಡೆಯಲು ಹರಸಾಹಸಪಟ್ಟು ಹೆಚ್.ಡಿ ಕುಮಾರಸ್ವಾಮಿ ಅವರಿಗೆ ಇನ್ನಿಲ್ಲದ ವಿಷಯವನ್ನು ಹೇಳಿಕೊಟ್ಟು ನಮಗೆ ಸತಾಯಿಸಿದ್ದರು. ಇಂದು ಅವರು ಆ ನೋವನ್ನು ಅನುಭವಿಸುತ್ತಿದ್ದಾರೆ ಎಂದು ಗೌರಿ ಶಂಕರ್ ಹೇಳಿದ್ರು.
ಇನ್ನು, ಚೆಲುವರಾಯಸ್ವಾಮಿಗೆ ಕಾಂಗ್ರೆಸ್ ಅಥವಾ ಬಿಜೆಪಿ ವಿರುದ್ಧ ಮಾತನಾಡುವ ತಾಕತ್ತು ಇಲ್ಲ. ಹಾಗಾಗಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರ ಬಗ್ಗೆ ಹೇಳಿಕೆ ನೀಡುವುದನ್ನು ರೂಢಿಸಿಕೊಂಡಿದ್ದಾರೆ ಎಂದರು.
ಜೆಡಿಎಸ್ ಹಾಗೂ ಕಾಂಗ್ರೆಸ್ನ ಶಾಸಕರು, ಪಕ್ಷ ಬಿಟ್ಟು ಹೋಗಿರುವಂತಹ 17 ಮಂದಿ ಶಾಸಕರ ಸ್ಥಿತಿ ಏನಾಗಿದೆ ಎಂಬುದನ್ನು ಗಮನಿಸಿ ಆನಂತರ ಹೆಜ್ಜೆ ಇಡುವಂತೆ ತಿಳಿಸಿದರು. ಬಿಜೆಪಿಯವರು ಈಗಾಗಲೇ ರಾಜ್ಯದಲ್ಲಿ ದ್ವೇಷ ರಾಜಕಾರಣ ಆರಂಭಿಸಿದ್ದಾರೆ. ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದರು. ಆದರೆ ಹೆಚ್ಡಿಕೆ ಅಧಿಕಾರದಲ್ಲಿದ್ದಾಗ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರಕ್ಕೆ ಬಿಡುಗಡೆ ಮಾಡಿದ್ದ ವಿಶೇಷ ಅನುದಾನವನ್ನು ತಡೆಹಿಡಿಯಲಾಗಿದೆ. ದಯವಿಟ್ಟು ದ್ವೇಷದ ರಾಜಕಾರಣ ಮಾಡಬೇಡಿ ಎಂದು ಸಿಎಂಗೆ ಶಾಸಕ ಗೌರಿ ಶಂಕರ್ ಮನವಿ ಮಾಡಿದರು.
ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಹದಿಂದ ಸಾವು-ನೋವು ಸಂಭವಿಸಿದ ಹಿನ್ನೆಲೆಯಲ್ಲಿ ಸರಳವಾಗಿ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಳ್ಳುತ್ತಿರುವುದಾಗಿ ತಿಳಿಸಿದ್ರು.