ತುಮಕೂರು:ನಗರದಲ್ಲಿ ವ್ಯಾಕ್ಸಿನ್ ಪಡೆಯಲು ಅಲ್ಪಸಂಖ್ಯಾತರು ವಾಸಿಸುತ್ತಿರುವ ಪ್ರದೇಶಗಳಲ್ಲಿ ಜನರು ಹಿಂದೇಟು ಹಾಕುತ್ತಿರುವುದು ಜಿಲ್ಲಾಡಳಿತಕ್ಕೆ ಸಾಕಷ್ಟು ತಲೆನೋವು ತರಿಸಿದೆ.
ವ್ಯಾಕ್ಸಿನ್ ಪಡೆದರೆ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂಬ ಅಪಪ್ರಚಾರದಿಂದ ಜನರನ್ನು ಹೊರ ತರಲು ಜಿಲ್ಲಾಡಳಿತ ಹರಸಾಹಸಪಡುತ್ತಿದೆ. ಕೆಲವು ತಿಂಗಳ ಹಿಂದೆ ವಾಟ್ಸಪ್ನಲ್ಲಿ ಹರಿದಾಡುತ್ತಿರುವ ತಪ್ಪು ಸಂದೇಶಗಳೇ ಇದಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ನಗರದ ಪ್ರತಿಯೊಂದು ಮಸೀದಿಗಳ ಮೂಲಕ ವ್ಯಾಕ್ಸಿನ್ ಹಾಕಿಸಿಕೊಂಡರೆ ಉತ್ತಮ ಎಂಬ ಸಂದೇಶವನ್ನು ಸಾರಲಾಗುತ್ತಿದೆ. ಸೌದಿ ಅರೇಬಿರಿಯಾದಲ್ಲಿಯೂ ವ್ಯಾಕ್ಸಿನ್ಅನ್ನು ಕಡ್ಡಾಯವಾಗಿ ಹಾಕಿಸಿಕೊಳ್ಳಬೇಕು ಎಂದು ನಿಯಮ ಜಾರಿಗೊಳಿಸಲಾಗಿದೆ. ಹೀಗಾಗಿ ವ್ಯಾಕ್ಸಿನ್ ಹಾಕಿಸಿಕೊಳ್ಳುವಂತೆ ಅವರಲ್ಲಿ ಬೇರೂರಿರುವ ಅನುಮಾನಗಳನ್ನು ಹೋಗಲಾಡಿಸಲಾಗುತ್ತಿದೆ ಎಂದು ಕಾಂಗ್ರೆಸ್ ಮಾಜಿ ಶಾಸಕ ರಫೀಕ್ ಅಹಮದ್ ತಿಳಿಸಿದ್ದಾರೆ.
ತುಮಕೂರಲ್ಲಿ ವ್ಯಾಕ್ಸಿನ್ ಪಡೆಯಲು ಅಲ್ಪಸಂಖ್ಯಾತರ ಹಿಂದೇಟು ಇನ್ನೊಂದೆಡೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಕೂಡ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ವ್ಯಾಕ್ಸಿನ್ ಹಾಕಿಕೊಳ್ಳದೇ ಕೆಲವೊಂದು ಅಪಪ್ರಚಾರಗಳಿಂದ ದೂರ ಉಳಿದಿರುವವರನ್ನು ಪತ್ತೆ ಹಚ್ಚಲಾಗುತ್ತಿದೆ. ಆ ಸಮುದಾಯದ ಅಧಿಕಾರಿ, ಸರ್ಕಾರಿ ನೌಕರರು, ವೈದ್ಯರಿಗೆ ಮನವೊಲಿಸುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ ಎಂದರು.
ವ್ಯಾಕ್ಸಿನ್ ಹಾಕಿಕೊಂಡರೆ ಮಕ್ಕಳಾಗುವುದಿಲ್ಲ. ಅಲ್ಪಸಂಖ್ಯಾತರಿಗೆ ಬೇರೆ ರೀತಿಯ ವ್ಯಾಕ್ಸಿನ್ ನೀಡಲಾಗುತ್ತಿದೆ ಎಂದು ಅಪಪ್ರಚಾರ ಮಾಡಲಾಗಿದೆ. ಮೊದ ಮೊದಲು ಒಂದು ತಿಂಗಳು ವ್ಯಾಕ್ಸಿನ್ ತೆಗೆದುಕೊಳ್ಳುವುದಿಲ್ಲ ಎನ್ನಲಾಗುತ್ತಿತ್ತು. ಇದೀಗ ತೆಗೆದುಕೊಳ್ಳುವುದೇ ಇಲ್ಲ ಎನ್ನುತ್ತಿದ್ದಾರೆ. ಹೀಗಾಗಿ ಅವರ ಮನವೊಲಿಸಲಾಗುತ್ತಿದೆ. 45ಕ್ಕಿಂತ ಮೇಲ್ಪಟ್ಟ ಶೇ. 50ರಷ್ಟು ಜನರಿಗೆ ವ್ಯಾಕ್ಸಿನ್ ನೀಡಲಾಗಿದೆ. ಅಲ್ಪಸಂಖ್ಯಾತರ ಧಾರ್ಮಿಕ ಕೇಂದ್ರಗಳಲ್ಲಿಯೇ ವ್ಯಾಕ್ಸಿನ್ ನೀಡುವ ವ್ಯವಸ್ಥೆ ಮಾಡುವ ಭರವಸೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.