ತುಮಕೂರು: ಮೇಕೆದಾಟು ಯೋಜನೆ ಅನುಷ್ಠಾನವನ್ನು ತಾಂತ್ರಿಕವಾಗಿ ಸರಳೀಕರಿಸಲಾಗುತ್ತಿದೆ. ಈ ಬಗ್ಗೆ ಯಡಿಯೂರಪ್ಪ ಮತ್ತು ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ ಎಂದು ಸಚಿವ ವಿ. ಸೋಮಣ್ಣ ತಿಳಿಸಿದರು.
ತುಮಕೂರಿನ ಸಿದ್ದಗಂಗಾ ಮಠದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಸಚಿವ ಸೋಮಣ್ಣ, 'ಕಾಂಗ್ರೆಸ್ ನೇತೃತ್ವದ ಸರ್ಕಾರದಲ್ಲಿ ಡಿ.ಕೆ.ಶಿವಕುಮಾರ್ ಅವರೇ ಇದ್ದರು. ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇದೆ. ಮೇಕೆದಾಟು ಯೋಜನೆ ಅವರ ಕ್ಷೇತ್ರದ ವ್ಯಾಪ್ತಿಯಲ್ಲಿ ಬರಲಿದೆ. ಆದ್ದರಿಂದ, ಅವರು ಯೋಜನೆ ಕುರಿತು ಹೋರಾಟ ನಡೆಸುತ್ತಿದ್ದಾರೆ. ಜನರು ದಡ್ಡರಲ್ಲ, ವಾಸ್ತವಾಂಶಕ್ಕೆ ಆದ್ಯತೆ ನೀಡುತ್ತಾರೆ' ಎಂದರು.
'ಕೊರೊನಾ ಸೋಂಕಿನ ಹರಡುವಿಕೆ ತಡೆಗಟ್ಟಲು ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಮುಖ್ಯಮಂತ್ರಿ ಬೊಮ್ಮಾಯಿ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಅಲ್ಲದೆ, ಭಾನುವಾರ ಬೆಂಗಳೂರು ನಗರ ವ್ಯಾಪ್ತಿಯ ಸಚಿವರ ಸಭೆ ಕರೆದಿದ್ದಾರೆ. ಹಂತ ಹಂತವಾಗಿ ಕೋವಿಡ್ ನಿಯಂತ್ರಿಸುವ ಬಗ್ಗೆ ಅನುಭವವಿದೆ' ಎಂದು ಹೇಳಿದರು.
ಮಹಾರಾಷ್ಟ್ರ, ಕೇರಳ ಹಾಗು ದೆಹಲಿಯಲ್ಲಿ ಕೊರೊನಾ 3ನೇ ಅಲೆ ಹೆಚ್ಚುತ್ತಿದೆ. 3ನೇ ಅಲೆ ವೇಳೆ ಜನರು ಸಾಮಾಜಿಕ ಅಂತರ ಕಾಪಾಡಿಕೊಂಡು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಇದೇ ವೇಳೆ ಮನವಿ ಮಾಡಿದರು.
ಇದನ್ನೂ ಓದಿ:ಪಿಎಂ ಕಿಸಾನ್ ಯೋಜನೆ: 10ನೇ ಕಂತಿನಡಿ ಕರ್ನಾಟಕಕ್ಕೆ ₹685 ಕೋಟಿ ಹಣ ಬಿಡುಗಡೆ