ಬೆಂಗಳೂರು: ಜಿಲ್ಲಾ ಕೇಂದ್ರಗಳ ಬಸ್ ನಿಲ್ದಾಣಕ್ಕೆ ಹೈಟೆಕ್ ಸ್ಪರ್ಶ ನೀಡುತ್ತಿರುವ ರಾಜ್ಯ ರಸ್ತೆ ಸಾರಿಗೆ ನಿಗಮವು ಸ್ಮಾರ್ಟ್ ಸಿಟಿ ಯೋಜನೆಯಡಿ 111 ಕೋಟಿ ರೂ ವೆಚ್ಚದಲ್ಲಿ ಅತ್ಯಾಧುನಿಕ ಸೌಲಭ್ಯದ ಐದಂತಸ್ತಿನ ಬೃಹತ್ ಕಟ್ಟಡವನ್ನೊಳಗೊಂಡ ಟರ್ಮಿನಲ್ ಅನ್ನು ತುಮಕೂರಿನಲ್ಲಿ ನಿರ್ಮಿಸುತ್ತಿದ್ದು ಹೊಸ ಕಟ್ಟಡ ನಿರ್ಮಾಣ ಕಾರ್ಯವನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಇಂದು ಪರಿಶೀಲಿಸಿದ್ದಾರೆ.
ಕೆಳ ಮಹಡಿ, ನೆಲ ಮಹಡಿಯೊಂದಿಗೆ ಮೊದಲ, ಎರಡನೇ ಹಾಗು ಮೂರನೇ ಮಹಡಿವರೆಗೆ ನಿರ್ಮಾಣಗೊಳ್ಳುತ್ತಿರುವ ಹೊಸ ಕಟ್ಟಡದಲ್ಲಿ ಕೆಎಸ್‌ಆರ್‌ಟಿಸಿ ಆಡಳಿತ ಕಚೇರಿ, ಶಾಪಿಂಗ್ ಮಾಲ್, ಕುಡಿಯುವ ನೀರಿನ ಸೌಲಭ್ಯ, ಹೋಟೆಲ್, ಲಾಡ್ಜ್, ಶೌಚಾಲಯಗಳು, 4 ಎಸ್ಕಲೇಟರ್ಗಳು ಮತ್ತು 04 ಲಿಫ್ಟ್ಗಳು, ಸೌರ ಮೇಲ್ಛಾವಣಿ, ಮಳೆ ನೀರು ಕೊಯ್ಲು ವ್ಯವಸ್ಥೆ, ಅಗ್ನಿ ಸುರಕ್ಷತಾ ವ್ಯವಸ್ಥೆ, ಪಾರ್ಕಿಂಗ್ ಸೌಲಭ್ಯ, ವೈದ್ಯಕೀಯ ಸೇವಾ ಕೇಂದ್ರ, ಟಿಕೆಟ್ ಕಾಯ್ದಿರಿಸುವ ಕೇಂದ್ರ, ಲಗೇಜ್ ರೂಮ್, ಮಹಿಳಾ ವಿಶ್ರಾಂತಿ ಕೊಠಡಿ ಮತ್ತು ಶಿಶು ಆರೈಕೆ ಕೊಠಡಿಗಳು ಹೊಸ ಕಟ್ಟಡದಲ್ಲಿದ್ದು ಎಲ್ಲವನ್ನೂ ಖುದ್ದು ಪರಿಶೀಲನೆ ನಡೆಸಿದರು.
4.17 ಎಕರೆ ಪ್ರದೇಶದಲ್ಲಿ ತಲೆ ಎತ್ತುತ್ತಿರುವ ಬೃಹತ್ ಬಸ್ ಟರ್ಮಿನಲ್ ರಾಜ್ಯದ ಪ್ರಮುಖ ಟರ್ಮಿನಲ್ಗಳಲ್ಲಿ ಒಂದು. ಬೆಂಗಳೂರಿಗೆ ಸಂಪರ್ಕ ಕಲ್ಪಿಸಲು ಉತ್ತರ ಕರ್ನಾಟಕ ಭಾಗದ ಹೆಬ್ಬಾಗಿಲ ರೀತಿ ತುಮಕೂರು ಇದ್ದು ಹೆಚ್ಚಿನ ಬಸ್ಗಳ ಸಂಚಾರ ಇರುವ ಕಾರಣದಿಂದ ಈ ನಿಲ್ದಾಣ ಮಹತ್ವದ್ದು. ಚಿಕ್ಕಮಗಳೂರು, ಶಿವಮೊಗ್ಗ, ಕಾರವಾರ ಭಾಗ, ದಾವಣಗೆರೆ, ಹುಬ್ಬಳ್ಳಿ ಒಳಗೊಂಡ ಮಧ್ಯ ಕರ್ನಾಟಕ, ವಾಯುವ್ಯ ಸಾರಿಗೆ ಮತ್ತು ಕಲ್ಯಾಣ ಕರ್ನಾಟಕ ಭಾಗಕ್ಕೆ ಸಂಪರ್ಕ ಕಲ್ಪಿಸುವ ಬಸ್ಗಳು ತುಮಕೂರು ಮಾರ್ಗದಿಂದಲೇ ತೆರಳುವ ಹಿನ್ನೆಲೆಯಲ್ಲಿ ಹೈಟೆಕ್ ಬಸ್ ನಿಲ್ದಾಣಕ್ಕೆ ಹೆಚ್ಚಿನ ಮಹತ್ವವಿದೆ ಎಂದು ಸಚಿವರು ಅಭಿಪ್ರಾಯಪಟ್ಟರು.