ತುಮಕೂರು: ನಿನ್ನೆ ತುಮಕೂರಿನ ಸಿದ್ದಗಂಗಾ ಮಠದ ಹಿಂಭಾಗ ಇದ್ದ ಗೋಕಟ್ಟೆಯಲ್ಲಿ ಮುಳುಗಿ ನಾಲ್ವರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಖುದ್ದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೆ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಕಲೆಹಾಕಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ''ನಿನ್ನೆ ಮಧ್ಯಾಹ್ನ ಸುಮಾರು ಎರಡು ಗಂಟೆಯ ಸಮಯದಲ್ಲಿ ರಂಜಿತ್ (7 ವರ್ಷ) ಎಂಬ ವಿದ್ಯಾರ್ಥಿ ತನ್ನ ತಾಯಿ ಊಟ ತಂದಿದ್ದರಿಂದ ತಿನ್ನುವುದಕ್ಕಾಗಿ ಅವರಿಬ್ಬರು ಇಂಗು ಗುಂಡಿ ಬಳಿ ಬಂದಿದ್ದಾರೆ. ಈ ವೇಳೆ ರಂಜಿತ್ ಕಾಲು ಕೆಸರಾಗಿದೆ ಅಂತ ಕಾಲು ತೊಳೆಯಲು ಹೋಗಿ ಜಾರಿ ಹೊಂಡದಲ್ಲಿ ಬಿದ್ದಿದ್ದಾನೆ. ಅವನಿಗೆ ಮತ್ತೆ ಮೇಲೆ ಎದ್ದು ಬರುವುದಕ್ಕೆ ಕಷ್ಟ ಆಗಿದೆ. ಆ ಸಂದರ್ಭದಲ್ಲಿ ಮಗನನ್ನು ಎಳೆದುಕೊಳ್ಳಲು ಹೋಗಿ ಅವರೂ ಬಿದ್ದಿದ್ದಾರೆ.
ಆಮೇಲೆ ಆತನ ಜೊತೆಗೆ ಇದ್ದ ಇನ್ನೊಬ್ಬ ಹುಡುಗ ರಂಜಿತ್ನನ್ನು ಎಳೆದುಕೊಳ್ಳಲು ಹೋಗಿ ಅವನೂ ಕೂಡಾ ನೀರಿಗೆ ಬಿದ್ದಿದ್ದಾನೆ. ಈ ಮೂರು ಜನ ಒದ್ದಾಡುವುದನ್ನು ನೋಡಿ ಮಹದೇವಪ್ಪ ಎಂಬ ಪೋಷಕರು ರಕ್ಷಿಸಲು ಹೋಗಿ, ಬಿದ್ದಿದ್ದಾರೆ. ಆ ಸಂದರ್ಭದಲ್ಲಿ ಮಹದೇವಪ್ಪ ರಂಜಿತ್ನನ್ನ ರಕ್ಷಣೆ ಮಾಡಿದ್ದಾರೆ. ಮಿಕ್ಕ ನಾಲ್ಕು ಜನ ನೀರಲ್ಲಿ ಮುಳುಗಿದ್ದಾರೆ. ಹೊಂಡದಲ್ಲಿ 10- 15 ಅಡಿ ನೀರಿದೆ. ಅವರಿಗೆ ಈಜಿಕೊಂಡು ಬರಲು ಬರುತ್ತಿರಲಿಲ್ಲ ಅನಿಸುತ್ತೆ, ಹಾಗಾಗಿ ಸಾವನ್ನಪ್ಪಿದ್ದಾರೆ ಎಂದರು.
ಮೊದಲನೆಯದಾಗಿ ನಾನು ಈ ಘಟನೆಯ ಬಗ್ಗೆ ವಿಷಾದವನ್ನು ವ್ಯಕ್ತಪಡಿಸುತ್ತೇನೆ. ಶ್ರೀ ಮಠದಲ್ಲಿ ಇಂತಹ ಘಟನೆ ಬಹಳ ವಿರಳ. ಇಂತಹ ಘಟನೆ ಆಗೋದಿಲ್ಲ. ಆದರೂ ಕೂಡಾ ಇಂತಹ ಘಟನೆ ಆಗಿದೆ. ಮೃತರ ಆತ್ಮಕ್ಕೆ ಶಾಂತಿಯನ್ನು ಕೋರುತ್ತೇನೆ. ಅವರ ಕುಟುಂಬ ಇವತ್ತು ಬಹಳ ನೋವಿನಿಂದ ಇದೆ. ಭಗವಂತ ಮೃತರ ಕುಟುಂಬಕ್ಕೆ ನೋವು ತಡೆದುಕೊಳ್ಳುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂಪಾಯಿ ಪರಿಹಾರವಾಗಿ ನೀಡುವ ಕುರಿತಂತೆ ಈಗಾಗಲೇ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದೇನೆ'' ಎಂದು ಇದೇ ವೇಳೆ ತಿಳಿಸಿದರು.