ತುಮಕೂರು: ತಿಪಟೂರು ತಾಲೂಕಿನ ಕುರುಬರಹಳ್ಳಿ ಗ್ರಾಮದ ವಿದ್ಯಾರ್ಥಿ ಜೀವನ್ ಎಂಬಾತ ತಯಾರಿಸಿರುವ ವಿದ್ಯುತ್ ಚಾಲಿತ ವಾಹನವನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ಸಚಿವ ನಾಗೇಶ್ ಚಲಾಯಿಸುವ ಮೂಲಕ ವಿಶಿಷ್ಟ ಅನುಭವ ಪಡೆದರು.
ನೊಣವಿನಕೆರೆ ಹೋಬಳಿ ಕುರುಬರಹಳ್ಳಿ ಗ್ರಾಮದ ರೈತ ದಂಪತಿ ಶಿವಮೂರ್ತಿ ಮತ್ತು ಶೋಭ ಅವರ ಕಿರಿಯ ಪುತ್ರ ಜೀವನ್ ತಿಪಟೂರಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿಗೆ ಅನುತ್ತೀರ್ಣನಾದನು. ಆದರೆ, ಈತ ಜೀವನದಲ್ಲಿ ತೇರ್ಗಡೆಯಾಗುವಂತಹ ವಿದ್ಯುತ್ ಚಾಲಿತ ದ್ವಿಚಕ್ರವಾಹನ ಮತ್ತು ಪವರ್ ಟಿಲ್ಲರ್ ಅನ್ನು ಮಾರ್ಪಡಿಸಿದ್ದಾನೆ. ಇದೀಗ ಕೆಲಸಕ್ಕೆ ಬಾರದ ಜೀಪ್‌ವೊಂದನ್ನು ತೆಗೆದುಕೊಂಡು ವಿದ್ಯುತ್ ಚಾಲಿತ ವಾಹನವನ್ನಾಗಿ ಪರಿವರ್ತಿಸಿದ್ದಾನೆ.
ವಿದ್ಯುತ್ ಚಾಲಿತ ವಾಹನದಲ್ಲಿ ಸಚಿವ ನಾಗೇಶ್ ಜಾಲಿರೈಡ್ ಕೊರೊನಾ ಸಂದರ್ಭದಲ್ಲಿ ಎಲ್ಲಾ ವಿದ್ಯಾರ್ಥಿಗಳಂತೆ ಜೀವನ್ ಕೂಡ ಮೊಬೈಲ್ ಹುಳುವಾಗಿದ್ದ. ಬಳಿಕ ಸಮಯ ವ್ಯರ್ಥಮಾಡುವ ಬದಲು ವಿದ್ಯುತ್ ಚಾಲಿತ ವಾಹನಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದರ ಕುರಿತು ಆಸಕ್ತಿ ಮೂಡಿಸಿಕೊಂಡ.
ಕೊನೆಗೆ ನಾನು ಕೂಡ ಎಲೆಕ್ಟ್ರಿಕ್ ವಾಹನ ಸಿದ್ಧಪಡಿಸುತ್ತೇನೆಂದು ಪೋಷಕರಿಗೆ ತಿಳಿಸಿದಾಗ ಅವರು ಮಗನಿಗೆ ಹಳೆಯ ದ್ವಿಚಕ್ರವಾಹನವನ್ನು ಕೊಡಿಸಿದ್ದರು. ನಂತರ ಅದನ್ನು ವಿದ್ಯುತ್ ಚಾಲಿತ ದ್ವಿಚಕ್ರವಾಹನವಾಗಿ ಬದಲಾಯಿಸಿದ. ಇದಕ್ಕೆ ಅಣ್ಣ ಚಿರಂಜೀವಿ ಕೂಡ ಸಾಥ್ ನೀಡಿದ್ದು, ಚಿರಂಜೀವಿ ಐ.ಟಿ.ಐ ಮುಗಿಸಿ ಜೆ.ಸಿ.ಬಿ ಮೆಕಾನಿಕ್ ಆಗಿ ಕೆಲಸ ನಿರ್ವಹಿಸುತ್ತಿದ್ದಾನೆ.
ಇದನ್ನೂ ಓದಿ:ಜಗತ್ತಿನಾದ್ಯಂತ ಆಹಾರ ಕೊರತೆಯಿಂದ ಮಹಾ ದುರಂತ: ವಿಶ್ವಸಂಸ್ಥೆ ಎಚ್ಚರಿಕೆ