ತುಮಕೂರು: ಬೆಂಗಳೂರಿನಿಂದ ಜಿಲ್ಲೆಗೆ ಬರುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಇದರಿಂದ ಹಳ್ಳಿಗಳಲ್ಲಿ ಸೋಂಕು ಹರಡದಂತೆ ಕ್ರಮಕೈಗೊಳ್ಳಲು ಚೆಕ್ಪೋಸ್ಟ್ ಸ್ಥಾಪಿಸಲು ಅನುಮತಿ ನೀಡಬೇಕೆಂದು ವಿಡಿಯೋ ಕಾನ್ಪರೆನ್ಸ್ ಸಭೆಯಲ್ಲಿ ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ ಸಿ ಮಾಧುಸ್ವಾಮಿ ಮುಖ್ಯಮಂತ್ರಿ ಅವರಲ್ಲಿ ಕೋರಿದರು.
ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿವೆ. ಕೋವಿಡ್ ನಿಯಂತ್ರಣಕ್ಕೆ ಅಗತ್ಯ ನಿರ್ಧಾರ ತೆಗೆದುಕೊಳ್ಳಲು ಜಿಲ್ಲಾಡಳಿತಕ್ಕೆ ಸಂಪೂರ್ಣ ಸ್ವಾತಂತ್ರ್ಯ ನೀಡಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.
ಕಳೆದ ಬಾರಿಯಂತೆ ಈ ಬಾರಿಯೂ ಜಿಲ್ಲಾಸ್ಪತ್ರೆಯನ್ನು ಸಂಪೂರ್ಣ ಕೋವಿಡ್ ಆಸ್ಪತ್ರೆಯನ್ನಾಗಿ ಮಾರ್ಪಾಡು ಮಾಡಿ, ಶ್ರೀದೇವಿ ವೈದ್ಯಕೀಯ ಕಾಲೇಜನ್ನು ತಾತ್ಕಾಲಿಕವಾಗಿ ಸರ್ಕಾರಿ ಆಸ್ಪತ್ರೆಯನ್ನಾಗಿ ಮಾರ್ಪಾಡು ಮಾಡಿದರೆ ಹಾಸಿಗೆ ಸಮಸ್ಯೆಯನ್ನು ನಿಯಂತ್ರಿಸಬಹುದು ಎಂದು ಮುಖ್ಯಮಂತ್ರಿ ಅವರ ಗಮನಕ್ಕೆ ತಂದರು.
ಜಿಲ್ಲೆಯಲ್ಲಿ ಆಮ್ಲಜನಕ, ರೆಮಿಡಿಸಿವಿರ್ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಸರ್ಕಾರ ಜಿಲ್ಲೆಯ ಬೇಡಿಕೆಗೆ ತಕ್ಕಂತೆ ಆಮ್ಲಜನಕ ಮತ್ತು ರೆಮಿಡಿಸಿವಿರ್ ಪೂರೈಸಬೇಕು.
ಜಿಲ್ಲೆಯಲ್ಲಿ ಆರ್ಟಿಸಿಪಿಆರ್ ಪರೀಕ್ಷೆ ಮಾಡಲು ಒಂದು ಮೊಬೈಲ್ ವ್ಯಾನ್ ಅವಶ್ಯಕವಿದೆ. ಇದರಿಂದ ಮಧುಗಿರಿ, ಪಾವಗಡ, ಶಿರಾ ತಾಲೂಕಿನ ಕೋವಿಡ್ ಪರೀಕ್ಷೆಗಳನ್ನು ಮಾಡಲು ಸುಲಭವಾಗುತ್ತದೆ ಎಂದು ತಿಳಿಸಿದರು.
ಬೆಂಗಳೂರಿಗೆ ಸಮೀಪವಿರುವ ತುಮಕೂರು ಜಿಲ್ಲೆಯಲ್ಲಿ ಕೋವಿಡ್ ಪ್ರಕರಣ ಹೆಚ್ಚುತ್ತಿವೆ. ಕೋವಿಡ್ ನಿಯಂತ್ರಣಕ್ಕೆ ಜಿಲ್ಲಾಡಳಿತವು ಅಗತ್ಯ ಕ್ರಮಕೈಗೊಳ್ಳಬೇಕು. ಜಿಲ್ಲಾಡಳಿತಕ್ಕೆ ಈ ನಿಟ್ಟಿನಲ್ಲಿ ಸ್ವಾತಂತ್ರ್ಯವಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.
ಜಿಲ್ಲಾಧಿಕಾರಿಗಳಾದ ವೈ.ಎಸ್.ಪಾಟೀಲ ಮಾತನಾಡಿ, ಈಗಾಗಲೇ ತುಮಕೂರು ನಗರ ಸೇರಿದಂತೆ ಪ್ರತಿ ತಾಲೂಕಿನಲ್ಲಿಯೂ ಕೋವಿಡ್ ಕೇರ್ ಕೇಂದ್ರ ಸ್ಥಾಪಿಸಲಾಗಿದೆ. ಹೋಂ ಐಸೋಲೇಷನ್ನಲ್ಲಿರುವವರನ್ನು ಕೋವಿಡ್ ಕೇರ್ಗೆ ಸ್ಥಳಾಂತರ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿಗಳ ಗಮನಕ್ಕೆ ತಂದರು.
ಹೋಂ ಐಸೊಲೇಶನ್ನಲ್ಲಿರುವ ಸೋಂಕಿತರ ದಿನಚರಿ ಆರೋಗ್ಯ ವಿಚಾರಣೆ ನಡೆಸಲು ಹೆಲ್ತ್ ವಾರ್ ರೂಮ್ಗಳನ್ನು ಸ್ಥಾಪನೆ ಮಾಡಲಾಗಿದೆ. ಇವುಗಳ ಮೂಲಕ ಸೋಂಕಿತರ ಆರೋಗ್ಯ ವಿಚಾರಣೆ ಕಾರ್ಯ ಸಕ್ರಿಯವಾಗಿ ನಡೆಯುತ್ತಿದೆ.
ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ದಿನಕ್ಕೊಮ್ಮೆ ಕರೆ ಮಾಡಿ ವಿಚಾರಣೆ ಮಾಡಲಾಗುತ್ತಿದೆ. ಹೋಂ ಐಸೋಲೇಶನ್‌ನಲ್ಲಿರುವ ಸೋಂಕಿತರ ಆರೋಗ್ಯದಲ್ಲಿ ಏರುಪೇರು ಕಂಡು ಬಂದಲ್ಲಿ ತಕ್ಷಣ ಆಸ್ಪತ್ರೆಗೆ ದಾಖಲಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ತಿಳಿಸಿದರು.