ತುಮಕೂರು: ಮೂರು ಬಾರಿ ನನ್ನ ಖಾತೆಯನ್ನು ಬದಲಾಯಿಸಿದ್ದನ್ನು ಸಹಿಸಿಕೊಳ್ಳಲು ಆಗುವುದಿಲ್ಲ. ಇದರಿಂದ ನನ್ನ ನಿಷ್ಠೆ ಮತ್ತು ಪ್ರಾಮಾಣಿಕತೆಗೆ ಧಕ್ಕೆ ಉಂಟಾಗುತ್ತದೆ. ಹೀಗಾಗಿ ಧ್ವಜಾರೋಹಣದ ನಂತರ ನಾನು ರಾಜೀನಾಮೆ ಕೊಡುತ್ತೇನೆ ಎಂದು ಮುಖ್ಯಮಂತ್ರಿಗಳಿಗೆ ತಿಳಿಸಿದ್ದೆ ಎಂದು ಮಾಧುಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ 72ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನೂತನ ಸಚಿವರಿಗೆ ಖಾತೆ ನೀಡಬೇಕಾಗಿದ್ದು ಸಣ್ಣ ನೀರಾವರಿ ಖಾತೆ ಬಿಡಬೇಕೆಂದು ಮುಖ್ಯಮಂತ್ರಿಗಳು ನನಗೆ ದೂರವಾಣಿ ಮೂಲಕ ಸೂಚನೆ ನೀಡಿದ್ದರು. ನಾನು ಸಣ್ಣ ನೀರಾವರಿ ಖಾತೆ ಬಿಡುವುದಿಲ್ಲ, ಅದರಲ್ಲಿ ನಾನು ಮಗ್ನನಾಗಿದ್ದೇನೆ ಎಂದಿದ್ದೆ. ಅದಕ್ಕೆ ಮುಖ್ಯಮಂತ್ರಿಗಳು ಒಪ್ಪಿರಲಿಲ್ಲ ಹೀಗಾಗಿ ನಾನೂ ಸುಮ್ಮನಾಗಿದ್ದೆ ಎಂದು ತಿಳಿಸಿದ್ದಾರೆ.
ವೈದ್ಯಕೀಯ ಖಾತೆ ಜೊತೆಗೆ ಕನ್ನಡ ಮತ್ತು ಸಂಸ್ಕೃತಿ ಖಾತೆಯನ್ನು ಕೂಡ ಕೊಟ್ಟಿದ್ದರು ಅದಕ್ಕೆ ನಾನು ಪ್ರತಿಕ್ರಿಯಿಸಲಿಲ್ಲ ಸುಮ್ಮನಿದ್ದೆ ಎಂದಿದ್ದಾರೆ. ಮರುದಿನ ಕನ್ನಡ ಮತ್ತು ಸಂಸ್ಕೃತಿ ಖಾತೆಯನ್ನು ತೆಗೆದು ವಕ್ಫ್ ಖಾತೆಯನ್ನು ಕೊಟ್ಟರು. ಇದರಿಂದ ನಾನು ಸಾಕಷ್ಟು ಗೊಂದಲಕ್ಕೊಳಗಾದೆ ನನ್ನ ಖಾತೆಯನ್ನು ಪುನಃ ಬದಲಾಯಿಸಿದ್ದಾರೆ ಎಂದು ನನ್ನ ಮನಸ್ಸಿಗೆ ನೋವುಂಟಾಯಿತು ಎಂದರು.