ತುಮಕೂರು:ಜಿಲ್ಲೆಯಲ್ಲಿ ಕೋವಿಡ್-19 2ನೇ ಅಲೆ ವ್ಯಾಪಕವಾಗಿ ಹರಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಸನ್ನದ್ಧವಾಗಿದೆ ಎಂದು ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ.
ಕೋವಿಡ್ ಪ್ರಕರಣ ಹೆಚ್ಚಳವಾಗುತ್ತಿದ್ದು, ನಿಯಂತ್ರಣಕ್ಕಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಸಭೆ-ಸಮಾರಂಭ, ಆರ್ಕೆಸ್ಟ್ರಾ, ಜಾತ್ರೆಗಳ ಆಚರಣೆ ಹಾಗೂ ಸಂತೆಗಳನ್ನು ಕಡ್ಡಾಯವಾಗಿ ನಿಷೇಧಿಸಬೇಕು. ಆದೇಶ ಪಾಲಿಸದವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ತಹಶೀಲ್ದಾರ್ಗಳು ಕಾರ್ಯೋನ್ಮುಖರಾಗಿದ್ದಾರೆ ಎಂದರು.
ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣ ಕುರಿತು ಮಾಧುಸ್ವಾಮಿ ಮಾಹಿತಿ ಅದ್ಧೂರಿ ಮದುವೆಗೆ ಕಡಿವಾಣ
ಅದ್ಧೂರಿ ಮದುವೆಗಳನ್ನು ಮಾಡಬಾರದು. ಈಗಾಗಲೇ ಕಲ್ಯಾಣ ಮಂಟಪಗಳಲ್ಲಿ ನಿಗದಿಯಾಗಿರುವ ಮದುವೆಗಳಲ್ಲಿ 200ಕ್ಕಿಂತ ಹೆಚ್ಚು ಜನ ಸೇರಬಾರದು. ಬಂಧು-ಬಳಗವಷ್ಟೇ ಸೇರಿ ಮದುವೆ ಮಾಡಿಕೊಳ್ಳಬೇಕು. ನಿಯಮ ಮೀರಿ ಅದ್ಧೂರಿ ಮದುವೆ ಮಾಡುವ, 200ಕ್ಕಿಂತ ಹೆಚ್ಚು ಮಂದಿ ಸೇರುವ ಮದುವೆಯಲ್ಲಿ ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ.
ಲಸಿಕೆ ಪಡೆದುಕೊಳ್ಳಿ
ಕೋವಿಡ್ ನಿಯಂತ್ರಣದ ಸಲುವಾಗಿ ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ಈಗಾಗಲೇ ಏಪ್ರಿಲ್ 1ರಿಂದ ಜಿಲ್ಲೆಯಲ್ಲಿ ಕಡ್ಡಾಯವಾಗಿ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿದೆ. ಸಾರ್ವಜನಿಕರೂ ಇದಕ್ಕೆ ಸಹಕಾರ ನೀಡಿ ತಮ್ಮ ವ್ಯಾಪ್ತಿಯ ಆಸ್ಪತ್ರೆಗಳಿಗೆ ತೆರಳಿ ಲಸಿಕೆ ಪಡೆಯಬೇಕು ಎಂದು ಮನವಿ ಮಾಡಿದರು.
ಆಶಾ ಕಾರ್ಯಕರ್ತೆ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಂದ ಮನೆ ಮನೆ ಸರ್ವೇ ಮಾಡಿಸಲಾಗುವುದು. ಕೊರೊನಾ ಲಕ್ಷಣಗಳು ಕಂಡುಬಂದಲ್ಲಿ ಅವರನ್ನು ಆಸ್ಪತ್ರೆಗೆ ಕರೆದೊಯ್ದು ಕಡ್ಡಾಯವಾಗಿ ಕೊರೊನಾ ಪರೀಕ್ಷೆ ಮಾಡಿಸಲಾಗುವುದು. 45 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು ಎಂದು ಸೂಚಿಸಲಾಗಿದೆ ಎಂದರು.
ತಾಲೂಕು ದಂಡಾಧಿಕಾರಿ, ವೈದ್ಯರು ಹಾಗೂ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಕೋವಿಡ್ ನಿಯಂತ್ರಣಕ್ಕೆ ಸದಾ ಸಿದ್ಧರಿರುವಂತೆ ಸೂಚಿಸಲಾಗಿದೆ. ತಹಶೀಲ್ದಾರ್ಗಳು ಸ್ಥಳೀಯ ಶಾಸಕರ ನೇತೃತ್ವದಲ್ಲಿ ಸಭೆ ನಡೆಸಿ ಕೋವಿಡ್ ನಿಯಂತ್ರಣದ ಕುರಿತು ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಲಾಗಿದೆ ಎಂದರು.
ಕೊರೊನಾ 2ನೇ ಅಲೆ ಹಿನ್ನೆಲೆ ಪಡಿತರ ವಿತರಿಸುವಾಗ ಕೋವಿಡ್-19 ಮಾರ್ಗಸೂಚಿಯನ್ನು ಪಾಲಿಸಬೇಕು. ಒಂದೆಡೆ ವಿತರಿಸದೆ ಎರಡು ಮೂರು ಕಡೆ ಪಡಿತರ ನೀಡಲು ವ್ಯವಸ್ಥೆ ಮಾಡಬೇಕು. ಪಿಡಿಒಗಳು ಗ್ರಾಮೀಣ ಪ್ರದೇಶದಲ್ಲಿ ಸರಿಯಾಗಿ ಕೆಲಸ ನಿರ್ವಹಿಸಬೇಕು ಎಂದು ಸೂಚಿಸಲಾಗಿದೆ ಎಂದರು.