ತುಮಕೂರು: ಜಿಲ್ಲೆಯ ಹಲವು ನೀರಾವರಿ ಕಾಮಗಾರಿಗಳ ಕುರಿತುಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಚರ್ಚೆ ನಡೆಸಿದ್ದಾರೆ. ಪ್ರಮುಖವಾಗಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಿಂದ ಎತ್ತಿನಹೊಳೆ, ಹೇಮಾವತಿ ಹಾಗೂ ಭದ್ರ ಮೇಲ್ಡಂಡೆ ನೀರಾವರಿ ಯೋಜನೆಗಳಿಂದ ಜಿಲ್ಲೆಯ ಕೆರೆಗಳನ್ನು ತುಂಬಿಸುವ ಸಮಗ್ರ ಯೋಜನೆಯ ಕುರಿತು ಯೋಜನಾಧಿಕಾರಿಗೊಂದಿಗೆ ಜೊತೆ ಚರ್ಚೆ ನಡೆಸಿದ್ದಾರೆ.
ಜಿಲ್ಲಾ ಪಂಚಾಯಿತಿಯ ಸಭಾಂಗಣದಲ್ಲಿಂದು ವಿಡಿಯೋ ಕಾನ್ಪರೆನ್ಸ್ ಮೂಲಕ ಮೂರು ಯೋಜನೆಗಳಿಂದ ತಾಲೂಕುವಾರು ನೀರಿನ ಸಮಗ್ರ ಹಂಚಿಕೆಯ ಬಗ್ಗೆ ಚರ್ಚೆ ನಡೆಸಿದರು. ಮೂರು ಯೋಜನೆಗಳನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಂಡರೆ ಶೇ.50ರಷ್ಟು ಜಿಲ್ಲೆಯ ಕೆರೆಗಳು ತುಂಬಲಿವೆ. ಹಂಚಿಕೆಯಾದ ಎಲ್ಲಾ ಕೆರೆಗಳನ್ನು ಶೇ.50 ರಷ್ಟಾದರೂ ತುಂಬಿಸುವ ಗುರಿ ಹೊಂದಲಾಗಿದೆ.
ಹೇಮಾವತಿಯಿಂದ ಜಿಲ್ಲೆಗೆ ಹರಿಯುವ ನೀರನ್ನು ಈ ವರ್ಷ ಸಮಗ್ರವಾಗಿ ಬಳಕೆ ಮಾಡಲಾಗಿದೆ. ಆದರೆ, ನೀರು ಹರಿಯುವಿಕೆ, ಆವಿ ಇತ್ಯಾದಿ ಅಂಶಗಳಿಂದ ಮೂರು ಟಿಎಂಸಿ ನೀರು ಅಪವ್ಯಯವಾಗಿದ್ದು, ಕೆರೆಗಳಿಗೆ ಹಂಚಿಕೆಯಾದ ನೀರು ಅಪವ್ಯಯವಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶಿಸಿದರು.
ಹೇಮಾವತಿಯಿಂದ ಹಂಚಿಕೆಯಾದ ನೀರು ಬಹುತೇಕ ಕೆರೆಗಳಲ್ಲಿ ತಳದಲ್ಲಿಯೂ ನಿಲ್ಲುವುದಿಲ್ಲ. ಹೆಸರಿಗೆ ಮಾತ್ರ ನೀರು ಹಂಚಿಕೆ ಮಾಡಲಾಗಿದೆ. ಇದನ್ನು ಮಾರ್ಪಡಿಸಬೇಕು. ಕಡಿಮೆ ಹಂಚಿಕೆಯಾದ ಅಥವಾ ಎತ್ತಿನಹೊಳೆ, ಭದ್ರ ಮೇಲ್ದಂಡೆ ಯೋಜನೆಯ ನಾಲೆಗಳಿಗೆ ಸಮೀಪದ ಕೆರೆಗಳನ್ನು ಈ ಯೋಜನೆಗಳಿಂದಲೇ ತುಂಬಿಸಲಾಗುವುದು. ಇಂತಹ ಕೆರೆಗಳಿಗೆ ನಿಗದಿಯಾದ ನೀರನ್ನು ಕಡಿಮೆ ಹಂಚಿಕೆಯಾದ ಕೆರೆಗಳಿಗೆ ಹರಿಸುವ ಯೋಜನೆ ಸಿದ್ದಪಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ನೀರಾವರಿ ಯೋಜನೆಯ ಭೂ ಸ್ವಾಧೀನಕ್ಕಾಗಿ ರೈತರಿಗೆ ಪರಿಹಾರ ಶೀಘ್ರ ತಲುಪಿಸುವ ವ್ಯವಸ್ಥೆಯಾಗಬೇಕು. 2013ರ ಕಾಯ್ದೆ ಅಂತೆಯೇ ಭೂಸ್ವಾಧೀನಾ ಕಾಯ್ದೆಗೆ ಹಣ ಮೀಸಲಿಡಬೇಕು ಎಂದು ನೀರಾವರಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಕೇಶ್ ಸಿಂಗ್ ಅವರಿಗೆ ಸೂಚಿಸಿದರು.