ತುಮಕೂರು:ಗ್ರಾ. ಪಂಚಾಯಿತಿ ಚುನಾವಣೆ ಬಹಿಷ್ಕರಿಸಿದ್ದ ಗ್ರಾಮಸ್ಥರನ್ನು ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಮನಬಂದಂತೆ ಅವಾಚ್ಯ ಪದಪ್ರಯೋಗ ಬಳಸಿ ತರಾಟೆಗೆ ತೆಗೆದುಕೊಂಡಿರುವ ವಿಡಿಯೋ ಹಾಗೂ ಆಡಿಯೋ ವೈರಲ್ ಆಗಿದೆ.
ಸಚಿವ ಮಾಧುಸ್ವಾಮಿ ವೈರಲ್ ವಿಡಿಯೋ ಶಿರಾ ತಾಲೂಕಿನ ಬುಕ್ಕಾಪಟ್ಟಣ ಹೋಬಳಿಯ ಗೋಪಾಲದೇವರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾ.ಪಂ. ಚುನಾವಣೆಯನ್ನು ಗ್ರಾಮಸ್ಥರು ಬಹಿಷ್ಕರಿಸಿದ್ದರು. ಶೇಷೇನಹಳ್ಳಿ ಕೆರೆ ಮತ್ತು ದೊಡ್ಡ ಅಗ್ರಹಾರ ಕೆರೆಗಳಿಗೆ ಹೇಮಾವತಿ ನೀರು ಹರಿಸಬೇಕು ಹಾಗೂ ಶಾಶ್ವತ ಕುಡಿಯುವ ನೀರಿನ ಸೌಲಭ್ಯ ಒದಗಿಸಬೇಕೆಂಬ ಬೇಡಿಕೆ ಮುಂದಿರಿಸಿ ಅವರು ಚುನಾವಣೆ ಬಹಿಷ್ಕಾರದ ನಿರ್ಧಾರ ಕೈಗೊಂಡಿದ್ದರು.
ಚುನಾವಣೆಯ ನಂತರದ ದಿನಗಳಲ್ಲಿ ಗ್ರಾಮಕ್ಕೆ ಭೇಟಿ ನೀಡಿದ್ದ ಜಿಲ್ಲಾ ಜೆ.ಸಿ.ಮಾಧುಸ್ವಾಮಿ, ಸ್ಥಳೀಯರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು.
"ಜನರ ಮತದಾನದ ಹಕ್ಕನ್ನು ಹಾಳು ಮಾಡಬೇಡಿ. ನೀರು ಬಿಡ್ಸ್ರಯ್ಯಾ, ಅದ್ಯಾರ್ ಕೈಲಿ ಬಿಡಿಸ್ತೀರಾ ನಾನು ನೋಡ್ತೀನಿ. ಇಲ್ಲೊಬ್ಬ ಎಂಎಲ್ಎ ಇದಾರೆ ಅಂತಾ ಕೇಳಿದಿರೇನ್ರಿ..? ಬಂದ್ ಒಂದ್ ಮಾತ್ ಕೇಳಿದಿರೇನ್ರಿ..? ನೀರಿನ ಸಮಸ್ಯೆ ಇಲ್ಲಿ ಕೇಳಲ್ಲ ಅಂದಾಗ ಸ್ಟ್ರೈಕ್ ಮಾಡೋದ್ ಒಂದ್ ಗೌರವ..? ಅರ್ಜಿ ಕೊಟ್ಟು ಕೇಳಿ ನಾವೆಲ್ಲಾ ಇಲ್ಲ ಅಂದಾಗ ನೀವು ಹೇಳಬೇಕು. ಚುನಾವಣೆ ಬಾಯ್ಕಾಟ್ ಮಾಡೋವಂಥದ್ದೇನು" ಎಂದು ಗ್ರಾಮಸ್ಥರನ್ನು ಸಚಿವ ಮಾಧುಸ್ವಾಮಿ ಪ್ರಶ್ನಿಸಿದ್ದಾರೆ.
ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಸಾರ್ವಜನಿಕರೊಬ್ಬರು ಎಲ್ಲ ಘಟನಾವಳಿಗಳನ್ನು ಮೊಬೈಲ್ನಲ್ಲಿ ಸೆರೆ ಹಿಡಿದು ವೈರಲ್ ಮಾಡಿದ್ದಾರೆ.