ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿಕೆ ಶಿವಮೊಗ್ಗ:ಬೆಂಗಳೂರಿನ ಶಾಲೆಗಳಿಗೆ ಬಾಂಬ್ ಇರಿಸಿರುವ ಇ-ಮೇಲ್ ಬಗ್ಗೆ ಮಕ್ಕಳ ಪೋಷಕರು ಆತಂಕಕ್ಕೆ ಒಳಗಾಗಬಾರದು ಎಂದು ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಮನವಿ ಮಾಡಿದರು.
ಶಿವಮೊಗ್ಗ ಜಿಲ್ಲೆ ಸಾಗರದಲ್ಲಿಂದು ಮಾತನಾಡಿದ ಅವರು, ಬಾಂಬ್ ಬೆದರಿಕೆ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ನೋಡಿದೆ. ಇದು ಹುಸಿ ಎನ್ನಿಸುತ್ತಿದೆ. ಆದರೆ ಸರ್ಕಾರ ಹಗುರವಾಗಿ ನೋಡಿಲ್ಲ. ಇದರಲ್ಲಿ ಎರಡು ಭಾಗವಿದೆ. ಒಂದು ಇದನ್ನು ಕೆಲವು ಕಿಡಿಗೇಡಿಗಳು ಶಾಂತಿ ಕದಡಲು ಮಾಡಿರಬಹುದು, ಆ ರೀತಿ ಆಗಿದ್ದರೂ ಅದನ್ನು ಪತ್ತೆ ಹಚ್ಚಲಾಗುವುದು. ಅದು ಆಮೇಲಿನ ವಿಚಾರ. ಆದರೆ ಯಾರು ಶಾಲೆಗಳಿಗೆ ಬೆದರಿಕೆ ಇ-ಮೇಲ್ ಮಾಡಿದ್ದಾರೋ ಅವರ ವಿರುದ್ಧ ಕ್ರಮ ಕೈಗೊಳ್ಳಲು ನಾನು ಹಾಗೂ ಗೃಹ ಸಚಿವರು ಸಂಬಂಧಪಟ್ಟವರ ಜೊತೆ ಮಾತನಾಡಿದ್ದೇವೆ ಎಂದರು.
ಬಾಂಬ್ ಬೆದರಿಕೆ ವಿಚಾರನ್ನು ಹಗುರವಾಗಿ ನೋಡುವ ಪ್ರಶ್ನೆಯೇ ಇಲ್ಲ. ಯಾಕೆಂದರೆ ಇದು ಮಕ್ಕಳ ವಿಚಾರ. ಇದರಿಂದ ಸ್ವಾಭಾವಿಕವಾಗಿ ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ. ಹೀಗೇ ಬಿಟ್ಟರೆ ಮುಂದೆ ಬೇರೆ ಬೇರೆ ಶಾಲೆಗಳಿಗೂ ಈ ರೀತಿಯ ಇ-ಮೇಲ್ಗಳು ಬರಬಹುದು. ಇದೇ ರೀತಿ ಕಳೆದ ವರ್ಷ ಸಹ ಶಾಲೆಗಳಿಗೆ ಬೆದರಿಕೆ ಹಾಕಲಾಗಿತ್ತು. ಈ ವರ್ಷ ಇಷ್ಟೊಂದು ಶಾಲೆಗಳಿಗೆ ಬೆದರಿಕೆ ಹಾಕಲಾಗಿದೆ. ಎಲ್ಲರೂ ನಮ್ಮ ಸರ್ಕಾರದ ಮೇಲೆ ವಿಶ್ವಾಸವಿಡಿ. ಪೊಲೀಸರು ಬೆದರಿಕೆ ಮೇಲ್ ಮಾಡಿದವರನ್ನು ಪತ್ತೆ ಹಚ್ಚುತ್ತಾರೆ ಎಂದು ತಿಳಿಸಿದರು.
ನನ್ನ ಇಲಾಖೆಗೆ ಸಂಬಂಧಿಸಿದಂತೆ ಈ ಘಟನೆ ನಡೆದಿರುವುದರಿಂದ ನಾನು ಗೃಹ ಸಚಿವರ ಸಹಕಾರ ಪಡೆಯುತ್ತಿದ್ದೇನೆ. ಬೆಂಗಳೂರಿನ ಉಸ್ತುವಾರಿಯಾದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸಹ ಶಾಲೆಗಳಿಗೆ ಭೇಟಿ ನೀಡುತ್ತಿದ್ದಾರೆ. ನಾನು ಇಂದು ಸಂಜೆ ಬೆಂಗಳೂರಿಗೆ ಹೋಗುತ್ತಿದ್ದೇನೆ. ಎಲ್ಲಾ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದೇನೆ ಎಂದರು.
ಇದನ್ನೂ ಓದಿ:ಶಾಲೆಗಳಿಗೆ ಬೆದರಿಕೆ ಇ-ಮೇಲ್ ಕಳುಹಿಸಿದವರನ್ನು ಪತ್ತೆ ಹಚ್ಚಲು ಹೇಳಿದ್ದೇನೆ, ಆತಂಕ ಬೇಡ: ಸಿಎಂ