ತುಮಕೂರು: ''ಬೊಂಬೆಯನ್ನು ದೇವರು ಅಂತಾ ಹೇಳಿದ್ರೆ ಏನು ತಪ್ಪು?, ಬೊಂಬೆಯಲ್ಲಿ ದೈವತ್ವ ಇರೋದಿಲ್ವಾ?'' ಎಂದು ಸಚಿವ ಕೆ.ಎನ್.ರಾಜಣ್ಣ ಹೇಳಿದರು. ತುಮಕೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಬೊಂಬೆ ಅನ್ನೋ ಕಾರಣಕ್ಕೆ ತಿರಸ್ಕಾರ ಮನೋಭಾವದಿಂದ ಮಾತನಾಡ್ತಾರಲ್ಲ ಅದು ಸರೀನಾ?. ಟೂರಿಂಗ್ ಟಾಕೀಸ್ ರೀತಿಯೇ ಅವತ್ತಿನ ಪರಿಸ್ಥಿತಿ ಇತ್ತು. ಅದಕ್ಕೆ ಹೇಳಿದ್ದೇನೆ ನಾನು. ಅದನ್ನು ಬಿಟ್ಟು ದೇವರನ್ನೇ ಟೂರಿಂಗ್ ಟಾಕೀಸ್ ಅಂದಿಲ್ಲ'' ಎಂದು ಸ್ಪಷ್ಟನೆ ನೀಡಿದ್ದಾರೆ.
''ನಾನು ರೈತ. ಹೊಲಕ್ಕೆ ಹೋಗುವಾಗ ಸಗಣಿ ತೆಗೆದುಕೊಂಡು ಹೋಗಿ, ಸಗಣಿ ಮೂರ್ತಿ ಮಾಡಿ ಗರಿಕೆ ಹುಲ್ಲು ಇಟ್ಟು ಪೂಜೆ ಮಾಡ್ತಿದ್ದೆ. ಹೊಲದಲ್ಲಿ ಸಿಕ್ಕ ಬೆಣಚು ಕಲ್ಲಿಗೂ ಪೂಜೆ ಮಾಡ್ತಿದ್ವಿ. ಅದು ನಮ್ಮ ನಂಬಿಕೆ'' ಎಂದು ಹೇಳಿದ ಅವರು, ''ಬಾಬ್ರಿ ಮಸೀದಿ ಧ್ವಂಸ ಮಾಡಿದ್ದ ಸಮಯದಲ್ಲಿ ನಾನು ಅಲ್ಲಿಗೆ ಭೇಟಿ ಕೊಟ್ಟಿದ್ದೆ. ಅಲ್ಲಿ ಕಂಡ ಚಿತ್ರಣದ ಬಗ್ಗೆ ಅವತ್ತು ಹೇಳಿಕೊಂಡಿದ್ದೆ ಅಷ್ಟೇ'' ಎಂದರು.
ರಾವಣನಂತಹ ದೈವಭಕ್ತ ಯಾರೂ ಇರಲಿಲ್ಲ:''ಬಿಜೆಪಿಯವರು ನನಗೆ ರಾವಣ ಎಂದಿದ್ದಾರೆ. ಅದು ನನಗೆ ಬೇಜಾರಿಲ್ಲ. ರಾವಣ ಎಂದು ಅನಿಸಿಕೊಳ್ಳಲು ನಾನು ಸಿದ್ಧನಿದ್ದೇನೆ. ರಾವಣನಂತಹ ದೈವ ಭಕ್ತ ಯಾರೂ ಇರಲಿಲ್ಲ. ಇವರೆಲ್ಲ ಡೋಂಗಿ ದೈವ ಭಕ್ತರು'' ಎಂದು ಟೀಕಿಸಿದರು. ''ಹಿಂದೆ ಅಣ್ಣಾದೊರೈ ರಾಮಾಯಣಕ್ಕೆ ಬದಲಾಗಿ ರಾವಣನ ಕುರಿತಾಗಿ ನಾಟಕ ಆಡಿದ್ರು. ಈ ನಾಟಕದಲ್ಲಿ ರಾವಣ ಸೀತೆ ಮೇಲೆ ಬಲಾತ್ಕಾರ ಮಾಡೋದಿಲ್ಲ. ಇದು ರಾವಣನ ದೊಡ್ಡ ಗುಣ ಅಲ್ವೇ?'' ಎಂದ ಅವರು, ''ನಾನು ರಾಮ ಮತ್ತು ರಾವಣ ಇಬ್ಬರ ಪರ ಇದ್ದೇನೆ. ನನ್ನ ಹೇಳಿಕೆಯನ್ನು ನಾನು ಸಮರ್ಥನೆ ಮಾಡಿಕೊಳ್ಳುತ್ತೇನೆ. ನನ್ನ ಹೇಳಿಕೆಯಿಂದ ಹಿಂದೆ ಸರಿಯೋ ಪ್ರಶ್ನೆಯೇ ಇಲ್ಲ'' ಎಂದು ತಿಳಿಸಿದರು.