ತುಮಕೂರು:ಸಹಕಾರಿ ಇಲಾಖೆ ಸಚಿವ ಕೆ.ಎನ್. ರಾಜಣ್ಣ ಅವರ ಕಣ್ಣಿಗೆ ಪಟಾಕಿ ಕಿಡಿ ತಗುಲಿ ಗಾಯವಾಗಿರುವ ಘಟನೆ ಕುಣಿಗಲ್ ಪಟ್ಟಣದ ಹುಚ್ಚ ಮಾಸ್ತಿಗೌಡ ವೃತ್ತದಲ್ಲಿ ಇಂದು (ಭಾನುವಾರ) ಬೆಳಗ್ಗೆ ನಡೆದಿದೆ. ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ರಾಜಣ್ಣ ಶಕ್ತಿ ಯೋಜನೆಗೆ ಚಾಲನೆ ನೀಡಲು ತುಮಕೂರಿನಿಂದ ಕುಣಿಗಲ್ ಮಾರ್ಗವಾಗಿ ಹಾಸನಕ್ಕೆ ತೆರಳುತ್ತಿದ್ದರು. ಈ ಬಗ್ಗೆ ವಿಷಯ ತಿಳಿದ ಸಚಿವರ ಅಭಿಮಾನಿಗಳು, ಹಿತೈಷಿಗಳು, ಕಾಂಗ್ರೆಸ್ ಕಾರ್ಯಕರ್ತರು ಹುಚ್ಚ ಮಾಸ್ತಿಗೌಡ ಸರ್ಕಲ್ ಬಳಿ ಕಾರು ತಡೆದು ಪುಷ್ಪಮಾಲೆ ಹಾಕಿ ಅಭಿನಂದಿಸಿದ್ದಾರೆ. ಬಳಿಕ ಸಮೀಪದಲ್ಲೇ ಪಟಾಕಿ ಹಚ್ಚಿ ಸಿಡಿಸಿದ್ದಾರೆ.
ಈ ಸಂದರ್ಭದಲ್ಲಿ ಸಚಿವರು ಧರಿಸಿದ್ದ ಕನ್ನಡಕ ತೆಗೆಯುವುದೂ ಪಟಾಕಿ ಸಿಡಿಯುವುದೂ ಒಂದೇ ಸಮಯದಲ್ಲಿ ಜರುಗಿದೆ. ಪಟಾಕಿಯ ಕಿಡಿ ನೇರವಾಗಿ ಬಲ ಕಣ್ಣಿಗೆ ತಗುಲಿದೆ. ತಕ್ಷದ ಖಾಸಗಿ ಆಸ್ಪತ್ರೆಯೊಂದಕ್ಕೆ ತೆರಳಿ ನೇತ್ರ ತಜ್ಞ ಡಾ. ರವಿಕುಮಾರ್ ಅವರಿಂದ ಚಿಕಿತ್ಸೆ ಪಡೆದು, ಹಾಸನಕ್ಕೆ ತೆರಳಿದರು.
ಜಿಲ್ಲೆಯ 14 ಲಕ್ಷ ಮಹಿಳಾ ಪ್ರಯಾಣಿಕರಿಗೆ 'ಶಕ್ತಿ' : ತುಮಕೂರು ಜಿಲ್ಲೆಯಲ್ಲಿಂದು ಶಕ್ತಿ ಯೋಜನೆಗೆ ಚಾಲನೆ ದೊರೆಯಲಿದೆ. ಬಾಲಕಿಯರು, ಯುವತಿಯರು ಸೇರಿದಂತೆ ಜಿಲ್ಲೆಯ ಸುಮಾರು 14 ಲಕ್ಷ ಮಹಿಳೆಯರು ಈ ಯೋಜನೆಯ ಫಲಾನುಭವಿಗಳಾಗಲಿದ್ದಾರೆ ಎಂದು ಅಂದಾಜಿಸಲಾಗಿದೆ. ಜಿಲ್ಲೆಯಲ್ಲಿರುವ 7 ಕೆಎಸ್‌ಆರ್‌ಟಿಸಿ ಸಾರಿಗೆ ಘಟಕಗಳಿಂದ ನಿತ್ಯ 560 ಬಸ್ಸುಗಳು ಸಂಚರಿಸುತ್ತಿದ್ದು ಪ್ರತಿನಿತ್ಯ 1 ಲಕ್ಷ ಮಹಿಳಾ ಪ್ರಯಾಣಿಕರು ಓಡಾಡುತ್ತಾರೆ.