ತುಮಕೂರು: "ಚಿಕ್ಕನಾಯಕನಹಳ್ಳಿ ತಾಲೂಕು ಅಭಿವೃದ್ಧಿಯಾಗಿಲ್ಲ. ಮಾಧುಸ್ವಾಮಿ ಮಾತ್ರ ಅಭಿವೃದ್ಧಿಯಾಗಿದ್ದಾರೆ ಎಂದು ಪಂಚರತ್ನ ಯಾತ್ರೆಯಲ್ಲಿ ಹೆಚ್.ಡಿ.ಕುಮಾರಸ್ವಾಮಿ ಬಾಯಿ ಬಡಿದುಕೊಳ್ಳುತ್ತಿದ್ದಾರೆ. ಅವರಪ್ಪನನ್ನು ಲೋಕಸಭಾ ಚುನಾವಣೆಯಲ್ಲಿ ಗೆಲ್ಲಿಸೋಕೆ ಬಾರದವನು, ಈಗ ನಮ್ಮ ಕ್ಷೇತ್ರಕ್ಕೆ ಬಂದು ಭಾಷಣ ಮಾಡುತ್ತಿದ್ದಾನೆ" ಎಂದು ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದರು.
ಚಿಕ್ಕನಾಯಕನಹಳ್ಳಿ ತಾಲೂಕಿನ ಮತ್ತಿಘಟ್ಟದಲ್ಲಿ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ನಮ್ಮಪ್ಪ, ನಮ್ಮಜ್ಜ ಚೆನ್ನಾಗಿ ಬಾಳಿದವರು. ನನಗೇನೂ ಆಸ್ತಿ ಕೊರತೆ ಇರಲಿಲ್ಲ. ಇವರಪ್ಪನಿಗೆ ಹೊಳೆನರಸೀಪುರದಲ್ಲಿ 50 ರೂಪಾಯಿ ಕೊಟ್ಟು ಅಯ್ನೋರು ಕಾಂಟ್ರಾಕ್ಟ್ ಶುರು ಮಾಡಿಸಿದ್ದರು. ನನಗೆ ಆ ಸ್ಥಿತಿ ಬಂದಿಲ್ಲ. ಇವರ ಹಾಗೆ ದೋಚಿದ್ದು, ಬಾಚಿದ್ದು ನಂಬಿಕೊಂಡು ನಾನು ಬದುಕಲ್ಲ. ಅಪ್ಪ, ಮಕ್ಕಳು, ಮೊಮ್ಮಕ್ಕಳು, ಹೆಂಡತಿಯರು ಎಲ್ಲರೂ ದೋಚಲು ಶುರು ಮಾಡಿದ್ದಾರೆ" ಎಂದು ಮಾಧುಸ್ವಾಮಿ ಹರಿಹಾಯ್ದರು.
"ನಾವೆಲ್ಲ ಇವತ್ತು ಮತ್ತೆ ಸರ್ಕಾರ ತರಲೇ ಬೇಕು. ಮೂಕ ಪ್ರೇಕ್ಷಕರಾಗಿರುವುದು ನಮ್ಮ ದೌರ್ಭಾಗ್ಯ. ಯಾರೋ ಬಾಯಿಗೆ ಬಂದಹಾಗೆ ಸರ್ಕಾರದ ವಿರುದ್ದ ಮಾತನಾಡಿದಾಗ ನಾವೇ ಜಿಜ್ಞಾಸೆಗೆ ಒಳಗಾಗುತಿದ್ದೇವೆ. ನೀವೇನು ಎಂದು ನಾವು ವಾಪಸ್ ಕೇಳುತ್ತಿಲ್ಲ. ವಿರುದ್ಧ ಮಾತಾಡಿದವರಿಗೆ ನಾವು ಮರು ಪ್ರಶ್ನೆ ಹಾಕಲ್ಲ. ನಾವು ಕಾಂಗ್ರೆಸ್ನವರ ರೀತಿ ಅಗ್ರೆಸ್ಸಿವ್ ಆಗಿ ಮಾತನಾಡುತ್ತಿಲ್ಲ. ನಾವು ಗಟ್ಟಿ ಧ್ವನಿಯಲ್ಲಿ ನಮ್ಮ ಸಾಧನೆಯನ್ನು ಹೇಳಿಕೊಳ್ಳಬೇಕಾಗಿದೆ. ಆಗ ಅವರು ಬಾಯಿ ಮುಚ್ಚಿಕೊಳ್ಳುತ್ತಾರೆ. ವಿರೋಧಿಗಳನ್ನು ಆಡೋಕೆ ಬಿಟ್ಟರೆ ಅವರು ಆಡ್ತಾನೆ ಇರುತ್ತಾರೆ. ಅಮಾಯಕ ಜನರಿಗೆ ವಿರೋಧಿಗಳು ಹೇಳೋದೆ ಸತ್ಯ ಎನಿಸುತ್ತದೆ" ಎಂದರು.
"ದೇವೇಗೌಡರು ತುಮಕೂರಿಗೆ ಹೇಮಾವತಿ ನೀರನ್ನು ಕೊಡದೆ ಮೋಸ ಮಾಡಿದವರು. ನಾನು ಕಳೆದ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರ ಹೇಳಿಕೆಯ ಹಳೆಯ ಪೇಪರ್ ಕಟಿಂಗ್ ತೋರಿಸಿದ್ದೆ. ಹಾಗಾಗಿಯೇ ಜಿಲ್ಲೆಯ ಜನರು ದೇವೇಗೌಡರನ್ನು ಸೋಲಿಸಿದರು. ಇಷ್ಟೆಲ್ಲಾ ಮಾಡಿ ಕುಮಾರಸ್ವಾಮಿಯವರು ಚಿಕ್ಕನಾಯಕನಹಳ್ಳಿಗೆ ಪ್ರವಾಸ ಕೈಗೊಂಡಿದ್ದಾರೆ" ಎಂದು ಟೀಕಿಸಿದರು.