ತುಮಕೂರು:ಕಾಗಿನೆಲೆ ಈಶ್ವರಾನಂದ ಸ್ವಾಮೀಜಿ ಅವರಿಗೆ ಅವಹೇಳನಕಾರಿಯಾಗಿ ನಿಂದಿಸಿದ ಸಚಿವ ಜೆ.ಸಿ ಮಾಧುಸ್ವಾಮಿ ಕ್ಷಮೆ ಕೇಳಬೇಕು ಹಾಗೂ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕರ್ನಾಟಕ ಪ್ರದೇಶ ಕುರುಬ ಸಂಘದ ಪ್ರಧಾನ ಕಾರ್ಯದರ್ಶಿ ರಾಮಚಂದ್ರಪ್ಪ ಆಗ್ರಹಿಸಿದರು.
ಕಾಗಿನೆಲೆ ಈಶ್ವರಾನಂದ ಸ್ವಾಮೀಜಿಯನ್ನು ನಿಂದಿಸಿದ ಸಚಿವ ಜೆ.ಸಿ ಮಾಧುಸ್ವಾಮಿ ಕ್ಷಮೆ ಯಾಚಿಸಲಿ : ರಾಮಚಂದ್ರಪ್ಪ ಮಂಗಳವಾರ ನಗರದ ಕಾಳಿದಾಸ ಹಾಸ್ಟೆಲ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಮಚಂದ್ರಪ್ಪ, ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಪಟ್ಟಣದಲ್ಲಿ ಕಳೆದ 15 ವರ್ಷಗಳಿಂದ ಕನಕ ವೃತ್ತವಿದ್ದು, ಇಲ್ಲಿ ರಾಷ್ಟ್ರೀಯ ಹೆದ್ದಾರಿ ರಸ್ತೆ ಕಾಮಗಾರಿ ನಡೆಯುತ್ತಿದ್ದರಿಂದ ಕನಕ ವೃತ್ತ ಎಂಬ ನಾಮಫಲಕವನ್ನು ತೆರವುಗೊಳಿಸಲಾಗಿತ್ತು. ಪ್ರತಿ ವರ್ಷದಂತೆ ಈ ಬಾರಿಯೂ ಮೆರವಣಿಗೆಯನ್ನು ಅಲ್ಲಿಂದಲೇ ನಡೆಸುವ ಹಿನ್ನಲೆಯಲ್ಲಿ ತೆರವುಗೊಳಿಸಲಾಗಿದ್ದ ಸ್ಥಳದಲ್ಲಿಯೇ ನಮ್ಮ ಸಮಾಜದ ಮುಖಂಡರು ಹಾಗೂ ಬಂಧುಗಳು ಮತ್ತೆ ಕನಕ ವೃತ್ತ ಎಂಬ ನಾಮಫಲಕವನ್ನು ಪುನಃ ಸ್ಥಾಪಿಸಿ ಮೆರವಣಿಗೆ ನಡೆಸಿ ಅದನ್ನು ತೆರವುಗೊಳಿಸಲಾಗುವುದು ಎಂದು ತಿಳಿಸಿದರು.
ಇದರ ನಡುವೆ ಬೇರೆ ಗುಂಪಿನವರು ಈ ನಾಮಫಲಕವನ್ನು ತೆಗೆದುಹಾಕಬೇಕೆಂದು ಅಧಿಕಾರಿಗಳಿಗೆ ಒತ್ತಾಯ ಮಾಡುವ ಮೂಲಕ ತೆರವುಗೊಳಿಸಿದರು. ಇದರಿಂದ ಎರಡು ಗುಂಪುಗಳ ನಡುವೆ ಘರ್ಷಣೆ ಉಂಟಾಗಿದ್ದು, ಘರ್ಷಣೆಯನ್ನು ಶಮನಗೊಳಿಸಲು ಸಂಧಾನ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ. ಮಾಧುಸ್ವಾಮಿ ಹಾಗೂ ಕಾಗಿನೆಲೆ ಈಶ್ವರಾನಂದ ಸ್ವಾಮೀಜಿ ಭಾಗವಹಿಸಿದ್ದರು. ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವರು ಸ್ವಾಮೀಜಿಗಳಿಗೆ ಎಲ್ಲಾ ನೀವು ಹೇಳಿದಂತೆ ನಾವು ಕೇಳಬೇಕೇ? ಕಾನೂನು ಮಂತ್ರಿಯಾಗಿ ನನಗೆ ಏನು ಮಾಡಬೇಕು ಎಂದು ತಿಳಿದಿದೆ ಎದ್ದು ನಡೆಯಿರಿ ಎಂದು ಮಾತನಾಡಿದ್ದಾರೆ ಎಂದುಲ ಆರೋಪಿಸಿದ್ರು.
ಈ ಹೇಳಿಕೆ ನಮ್ಮ ಸ್ವಾಮೀಜಿಗಳಿಗೆ ಅಗೌರವ ತರುವಂಥದ್ದು, ಹಾಗಾಗಿ ಸ್ವಾಮೀಜಿ ಬಳಿ ಕ್ಷಮೆಯಾಚಿಸಬೇಕು. ಜೊತೆಗೆ ಇಂತಹ ಜನ ಪ್ರತಿನಿಧಿಗಳಿಂದ ಎಲ್ಲಾ ಜಾತಿಯವರಿಗೂ, ಎಲ್ಲಾ ಧರ್ಮದವರಿಗೂ ಸರಿಯಾದ ನ್ಯಾಯ ದೊರೆಯುವುದಿಲ್ಲ. ಹಾಗಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಕ್ರೋಶ ವ್ಯಕ್ತಪಡಿಸಿದ್ರು.