ಗೃಹ ಸಚಿವ ಡಾ.ಜಿ. ಪರಮೇಶ್ವರ್ ತುಮಕೂರು:ಅನ್ನಭಾಗ್ಯ ವಿಷಯದಲ್ಲಿ ಅನವಶ್ಯಕ ಗೊಂದಲ ಸೃಷ್ಟಿಯಾಗುತ್ತಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದರು. ತುಮಕೂರಿನಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗಾಗಲೇ ಕೇಂದ್ರ ಸರ್ಕಾರ ಐದು ಕೆಜಿ ಅಕ್ಕಿ ಕೊಡುತ್ತಿದೆ. ಇನ್ನೈದು ಕೆಜಿ ಅಕ್ಕಿಯನ್ನು ದುಡ್ಡು ಕೊಟ್ಟು ಕೊಂಡುಕೊಳ್ತೀವಿ ಕೊಡಿ ಎಂದು ಕೇಳುತ್ತಿದ್ದೇವೆ. ನಾವು ಅವರಿಗೆ ಫ್ರೀ ಕೊಡಿ ಎಂದು ಕೇಳಿಲ್ಲ ಎಂದರು.
ಭಾರತ ಆಹಾರ ನಿಗಮದವರು ನಮ್ಮ ಬಳಿ 7 ಲಕ್ಷ ಟನ್ ಅಕ್ಕಿ ಇದೆ ಕೊಡ್ತೀವಿ ಎಂದು ಜೂ.13ನೇ ತಾರೀಖು ಪತ್ರ ಬರೆದಿದ್ದರು. 14ನೇ ತಾರೀಖು ಇಲ್ಲ ಕೊಡಲು ಆಗುವುದಿಲ್ಲ ಎಂದು ಪತ್ರ ಬರೆಯುತ್ತಾರೆ. ಯಾರು ಅವರಿಗೆ ಅಕ್ಕಿ ಕೊಡಬೇಡಿ ಎಂದು ಸೂಚನೆ ಕೊಟ್ಟರು ಎಂದು ಪ್ರಶ್ನಿಸಿದ ಸಚಿವರು, ಆಹಾರ, ಕುಡಿಯುವ ನೀರಿನ ವಿಷಯದಲ್ಲಿ ರಾಜಕೀಯ ಮಾಡಬಾರದು ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.
ಹಿಂದೆ ಟ್ಯಾರಿಫ್ ಕಮಿಟಿಯವರು ವಿದ್ಯುತ್ ಬಿಲ್ ಡಬಲ್ ಮಾಡಿದ್ದಾರೆ. ಆ ಆದೇಶ ಈಗ ಜಾರಿಯಾಗಿದೆ. ಇದರಿಂದ ಕೈಗಾರಿಕೆಗಳಿಗೆ ಹೆಚ್ಚು ಹೊರೆಯಾಗುತ್ತಿದೆ. ಈಗಾಗಲೇ ಕೆಸಿಸಿನವರು ಸರ್ಕಾರದ ಗಮನಕ್ಕೆ ತಂದಿದ್ದಾರೆ. ಸರ್ಕಾರ ಸಂಬಂಧಪಟ್ಟ ಸಚಿವರನ್ನು ಕೆರೆಸಿ ಮಾತನಾಡುತ್ತದೆ. ಒಟ್ಟಾರೆ ಕೈಗಾರಿಕೋದ್ಯಮಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿ. ಛೇಂಬರ್ ಆಫ್ ಕಾಮರ್ಸ್ ಜೊತೆ ಸಂಬಂಧಪಟ್ಟ ಸಚಿವರು ಮಾತನಾಡುತ್ತಾರೆ ಎಂದರು.
ರಾಜ್ಯದಲ್ಲಿ ಮುಂಗಾರು ಮಳೆ ಇನ್ನೂ ಸರಿಯಾಗಿ ಪ್ರಾರಂಭವಾಗದ ಹಿನ್ನೆಲೆಯಲ್ಲಿ ಹಾಗೂ ಕಳೆದ ಬಾರಿ ಹೆಚ್ಚು ಮಳೆಯಾಗಿ ಹೇಮಾವತಿ ನಾಲೆಗಳಲ್ಲಿ ಕುಸಿತ ಉಂಟಾಗಿತ್ತು. ದುರಸ್ತಿ ಕಾರ್ಯ ನಡೆಯುತ್ತಿದೆ. ಈ ಎರಡು ಕಾರಣಗಳಿಂದ ಹೇಮಾವತಿ ನೀರನ್ನು ತುಮಕೂರು ಜಿಲ್ಲೆಗೆ ಹರಿಸಲು ಸಾಧ್ಯವಾಗುತ್ತಿಲ್ಲ. ತುಮಕೂರು ನಗರಕ್ಕೆ ಮುಂದಿನ 10 ದಿನಗಳವರೆಗೆ ಬಳಕೆ ಮಾಡಲು ಮಾತ್ರ ನಮ್ಮಲ್ಲಿ ಹೇಮಾವತಿ ನೀರು ಲಭ್ಯವಿದೆ. ಡೆಡ್ ಸ್ಟೋರೇಜ್ಗೆ ಬಂದು ತಲುಪಿದ್ದೇವೆ. ಹೀಗಾಗಿ ಈ ತಿಂಗಳ 25ನೇ ತಾರೀಖಿನ ಒಳಗೆ ಹೇಮಾವತಿ ನದಿ ನೀರನ್ನು ಜಿಲ್ಲೆಗೆ ತರುವಂತಹ ಕೆಲಸಕ್ಕೆ ಮುಂದಾಗಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಪರಮೇಶ್ವರ್ ತಿಳಿಸಿದರು.
ಇದನ್ನೂ ಓದಿ:Annabhagya: ಅನ್ನಭಾಗ್ಯ ಯೋಜನೆಗೆ ಅಕ್ಕಿಗಾಗಿ ಕೇಂದ್ರದ ವಿರುದ್ಧ ಬೆಳಗಾವಿ ಕಾಂಗ್ರೆಸ್ ಪ್ರತಿಭಟನೆ
ನಾಳೆ ದೆಹಲಿಗೆ ತೆರಳಿ ಕೇಂದ್ರ ಆಹಾರ ಸಚಿವರ ಬಳಿ ಚರ್ಚಿಸುವೆ - ಮುನಿಯಪ್ಪ:ಸಿಎಂ ನಿರ್ದೇಶನದ ಮೇರೆಗೆ ನಾಳೆ ದೆಹಲಿಗೆ ತೆರಳಿ, ಕೇಂದ್ರ ಆಹಾರ ಸರಬರಾಜು ಸಚಿವರನ್ನು ಭೇಟಿಯಾಗುತ್ತೇನೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಹೆಚ್. ಮುನಿಯಪ್ಪ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಒಡಿಶಾ, ಚತ್ತೀಸ್‌ಗಢ, ಆಂಧ್ರ ಪ್ರದೇಶ, ತೆಲಂಗಾಣ ಎಲ್ಲೆಡೆ ಅಕ್ಕಿ ಖರೀದಿಯ ಪ್ರಯತ್ನ ನಡೆಯುತ್ತಿದೆ. ಗ್ಯಾರಂಟಿ ಪ್ರಕಾರ 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಮಾತು ಕೊಟ್ಟಿದ್ದೇವೆ. ಎಫ್ಸಿಐ ಅಕ್ಕಿ ಕೊಡುತ್ತೇವೆ ಎಂದು ಜೂ. 13ಕ್ಕೆ ಹೇಳಿದ್ದರು. ಜೂ. 14 ಕ್ಕೆ ಕೊಡಲ್ಲ ಅಂತ ಹೇಳಿದ್ದಾರೆ. ಈ ಮೂಲಕ ಅಕ್ಕಿ ಖರೀದಿಯ ಪ್ರಯತ್ನ ಮಾಡುತ್ತೇವೆ ಎಂದರು.