ತುಮಕೂರು: ಬಡವರು, ರೈತರು ಹಾಗೂ ಸಾರ್ವಜನಿಕರಿಗೆ ಸೇವೆ ಸಲ್ಲಿಸುವ ಕೆಲಸವಾಗಬೇಕಿದೆ. ಯಾವ ಅಧಿಕಾರಿಗಳು ಹದ್ದುಮೀರಿ ನಡೆದುಕೊಳ್ಳಬಾರದು ಎಂದು ಕಂದಾಯ ಸಚಿವ ಆರ್.ಅಶೋಕ ಹೇಳಿದರು.
ಸುಮಾರು ಎರಡು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಸಿರಾ ಪಟ್ಟಣದ ಮಿನಿವಿಧಾನ ಸೌಧದ ಉದ್ಘಾಟನೆಯನ್ನು ಇಂದು ನೆರವೇರಿಸಲಾಯಿತು. ಬಿಎಸ್ವೈ ಮುಖ್ಯಮಂತ್ರಿ ಆಗುತ್ತಿದ್ದಂತೆ ಎಲ್ಲಾ ಡ್ಯಾಮ್ ತುಂಬುತ್ತವೆ. ನಿರೀಕ್ಷೆಗೂ ಮೀರಿ ಮಳೆ ಆಗುತ್ತದೆ. ಕೆಲವು ಸಿಎಂ ಪಟ್ಟಕ್ಕೆ ಏರಿದರೇ ಬರಗಾಲ, ಅತೀವೃಷ್ಟಿ ಬರುತ್ತದೆ ಎಂದು ವ್ಯಂಗ್ಯವಾಡಿದರು.
ಉದ್ಘಾಟನೆಗೂ ಮುನ್ನ ಮಿನಿ ವಿಧಾನಸೌಧ ಆವರಣದಲ್ಲಿ ಹಲಸಿನ ಸಸಿಗಳನ್ನು ಸಚಿವರಾದ ಆರ್.ಅಶೋಕ್, ಅರಣ್ಯ ಇಲಾಖೆ ಸಚಿವ ಆನಂದ್ ಸಿಂಗ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ನೆಟ್ಟರು. ನಂತರ ಈಚೆಗೆ ನಿಧನರಾದ ಸಿರಾ ಕ್ಷೇತ್ರದ ಜೆಡಿಎಸ್ ಶಾಸಕ ಸತ್ಯನಾರಾಯಣ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ಉದ್ಘಾಟನೆಯನ್ನು ಸಿಎಂ ಬಿಎಸ್ವೈ ಅವರಿಂದಲೇ ಆಗಬೇಕು ಎಂದು ದಿವಂಗತ ಶಾಸಕ ಸತ್ಯನಾರಾಯಣ ಅವರ ಅಪೇಕ್ಷೆ ಪಟ್ಟಿದ್ದರು. ಹೀಗಾಗಿ ಮಿನಿ ವಿಧಾನಸೌಧದ ಉದ್ಘಾಟನೆ ತಡವಾಯಿತು ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಸಮಜಾಯಿಷಿ ನೀಡಿದರು.