ತುಮಕೂರು:ಕಾಂಗ್ರೆಸ್ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಪರಮೇಶ್ವರ್ ಅವರ ರಾಜೀನಾಮೆ ವಿಚಾರಕ್ಕೆ ಸಂಬಂಧಿಸಿದಂತೆ ನಿನ್ನೆ ಸುದ್ದಿ ಹರಿದಾಡಿತು. ಆದರೆ, ಅದೆಲ್ಲಾ ಸುಳ್ಳು, ಕೆಲ ವಿಚಾರಗಳ ಬಗ್ಗೆ ಸುರ್ಜೆವಾಲಾ ಅವರೊಂದಿಗೆ ಚರ್ಚೆ ಮಾಡಿದ್ದೇನೆ ಎಂದು ಮಾಜಿ ಡಿಸಿಎಂ ಡಾ ಜಿ ಪರಮೇಶ್ವರ್ ಹೇಳಿದ್ದಾರೆ. ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಮಾರು 3 ಗಂಟೆ ಕಾಲ ಸುರ್ಜೆವಾಲಾ ಅವರೊಂದಿಗೆ ಚರ್ಚೆ ಮಾಡಿದ್ದೇನೆ. ನಾವು ಯಾವ ರೀತಿ ಚುನಾವಣೆಗೆ ಹೋಗ್ಬೇಕು. ಚುನಾವಣೆಗೆ ನಮ್ಮ ಪಕ್ಷದ ರಣನೀತಿ ಏನು ಇರಬೇಕು. ಚುನಾವಣಾ ಪ್ರಣಾಳಿಕೆಗಳು ಹೇಗೆ ಇರ್ಬೇಕು. ಜನ ಅದನ್ನೂ ಒಪ್ತರಾ ಎಂಬ ಬಗ್ಗೆ ಚರ್ಚೆ ನಡೆಸಿದ್ದೇವೆ ಎಂದು ತಿಳಿಸಿದರು.
ಸುರ್ಜೆವಾಲ ಅವರ ಭೇಟಿಯನ್ನೂ ಬೇರೆ ರೀತಿ ಬಿಂಬಿಸಲಾಗಿದೆ. ಕಾಂಗ್ರೆಸ್ ಹೊರಡಿಸಿದ ಎಲ್ಲ ಪ್ರಣಾಳಿಕೆಗಳು ನನ್ನ ಗಮನಕ್ಕೆ ಬಂದಿದೆ. ನಾವೆಲ್ಲರೂ ಒಟ್ಟಿಗೆ ಸೇರಿ ಮಾಡಿದ್ದೇವೆ. ಕೆಲವರು ನಮ್ಮಲ್ಲಿ ಅಸಮಾಧಾನ ತರೋಕೆ ಈ ರೀತಿ ಮಾಡ್ತಿದ್ದಾರೆ. ಗೃಹ ಲಕ್ಷ್ಮೀ ಭಾಗ್ಯ ಪ್ರಣಾಳಿಕೆಗೆ ಕೆಲವರು ಎಲ್ಲಿಂದ ಹಣ ತರ್ತಿರಾ ಅಂದ್ರು, ಅದಕ್ಕೆಲ್ಲಾ ನಾವು ಉತ್ತರ ಕೊಟ್ಟಿದ್ದೇವೆ ಎಂದು ಸ್ಪಷ್ಟ ಪಡಿಸಿದರು.
ನಾವು ಜನರಿಗೆ ಪ್ರಣಾಳಿಕೆ ಕೊಟ್ಟ ಮೇಲೆ ಅದನ್ನು ಜಾರಿಗೆ ತರಬೇಕು. ಅದರ ಬಗ್ಗೆ ನಾವು ಚರ್ಚೆ ಮಾಡಿದ್ದೇವೆ. 1ನೇ ತರಗತಿಯಿಂದ 5ನೇ ತರಗತಿ ವರೆಗೆ ಯಾರು ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸ್ತಾರೆ. ಅಂತ ಎಸ್ಸಿ, ಎಸ್ಟಿ ಸಮುದಾಯದ ಕುಟುಂಬಕ್ಕೆ ಹಣ ಬಿಡುಗಡೆ ಮಾಡುತ್ತೇವೆ ಎಂದು ಪ್ರಣಾಳಿಕೆ ಬಿಡುಗಡೆ ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.
ಅದಕ್ಕೆ ವರ್ಷಕ್ಕೆ 3600 ಕೋಟಿ ಹಣ ಬೇಕಾಗುತ್ತೆ. ಅದರ ಬಗ್ಗೆ ತೀರ್ಮಾನ ಮಾಡಿದ್ದೀವಿ.ನಿನ್ನೆ ಚಿತ್ರದುರ್ಗದಲ್ಲಿ 10 ಪ್ರಣಾಳಿಕೆಗಳನ್ನು ಘೋಷಣೆ ಮಾಡಿದ್ದೇವೆ. ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ವಿಚಾರದಲ್ಲಿ ನಾನು 8 ವರ್ಷ ಕೆಪಿಸಿಸಿ ಅಧ್ಯಕ್ಷ ಆಗಿದ್ದೆ. 224 ಕ್ಷೇತ್ರದಲ್ಲೂ ಸಹ ಅಭ್ಯರ್ಥಿಗಳಿದ್ದಾರೆ. ಅದರಲ್ಲಿ ಯಾರು ಅಂತ ತೀರ್ಮಾನ ಆಗ್ಬೇಕು. ನಿನ್ನೆ ಪಕ್ಷದ ಮುಖಂಡರೊಂದಿಗೆ ಸಭೆ ನಡೆಯಿತು ಎಂದರು.
ಕೆಲ ದಿನಗಳ ಹಿಂದೆ ನನ್ನ ಮನೆಗೆ ಅಟಿಕಾ ಬಾಬು ಬಂದಿದ್ರು. ನಾನು ಕಾಂಗ್ರೆಸ್ನಿಂದ ಸ್ಪರ್ಧೆ ಮಾಡ್ತಿನಿ ಅಂದ್ರು. ನೋಡಪ್ಪ ನಮ್ಮ ಹೈಕಮಾಂಡ್ ಇದೆ, ತಿರ್ಮಾನ ಮಾಡುತ್ತೆ ಅಂತ ಹೇಳಿದ್ದಿನಿ. ಇಲ್ಲಿ ಎಲ್ಲರನ್ನೂ ಒಟ್ಟಿಗೆ ತಗೊಂಡು ಹೋಗುವ ಪಾರ್ಟಿ ಕಾಂಗ್ರೆಸ್ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಕ್ಷದಲ್ಲಿ ದುಡಿದವರಿಗೆ ಮಾನ್ಯತೆ ಇದೆ. ಇನ್ನು ಸರ್ವೆಯಲ್ಲಿ ಕಾಂಗ್ರೆಸ್ಗೆ ಹಿನ್ನಡೆ ವಿಚಾರದಲ್ಲಿ ನಮ್ಮ ಪಕ್ಷದಿಂದ ಒಂದು ಸ್ಯಾಂಪಲ್ ಸರ್ವೆ ನಡೆದಿದೆ. ಆ ಸರ್ವೆ ಫಲಿತಾಂಶದಂತೆ ಕೆಲ ಬದಲಾವಣೆ ನಿರ್ಧಾರ ಮಾಡಲು ತಿರ್ಮಾನ ಮಾಡಿದ್ದೇವೆ. ಕಾಂಗ್ರೆಸ್ ಈ ಬಾರಿ ಗೆಲ್ಲಲೇ ಬೇಕು ಎಂದು ಹೇಳಿದರು.