ತುಮಕೂರು:ಕ್ಷುಲ್ಲಕ ಕಾರಣಕ್ಕೆ ಪತ್ನಿಯೊಂದಿಗೆ ಜಗಳ ಮಾಡಿಕೊಂಡು 10 ವರ್ಷಗಳ ಹಿಂದೆ ಮನೆ ಬಿಟ್ಟು ಭಿಕ್ಷಾಟನೆಯಲ್ಲಿ ತೊಡಗಿದ್ದ ವ್ಯಕ್ತಿಯೊಬ್ಬರು 50 ಸಾವಿರ ರೂಪಾಯಿಗೂ ಹೆಚ್ಚು ಹಣದೊಂದಿಗೆ ಇದೀಗ ಮರಳಿ ಮನೆ ಸೇರಿದ್ದಾರೆ. ಗುಬ್ಬಿ ತಾಲೂಕು ಚೇಳೂರು ಹೋಬಳಿ ಎಂ.ಹೆಚ್. ಪಟ್ನಾ ಗ್ರಾ.ಪಂ.ವ್ಯಾಪ್ತಿಯ ಮಾದಾಪುರ ಗ್ರಾಮದ ಗುರುಸಿದ್ದಪ್ಪ ಎಂಬವರು ಕುಟುಂಬಸ್ಥರನ್ನು ಸೇರಿದ್ದಾರೆ.
ಕಳೆದ ವಾರದಿಂದ ಜಿಲ್ಲೆಯ ಕೊರಟಗೆರೆ ತಾಲೂಕು ಚನ್ನರಾಯನದುರ್ಗ ಹೋಬಳಿ ಸಿದ್ದರಬೆಟ್ಟ ಗ್ರಾ.ಪಂ.ವ್ಯಾಪ್ತಿಯ ಮರೇನಾಯಕನಹಳ್ಳಿ ಗ್ರಾಮದ ತಂಗುದಾಣದ ಬಳಿ ಮತ್ತು ರಸ್ತೆ ಬದಿ ಮರದ ಕೆಳಗಡೆ ಕೊಳಕು, ಹರಿದ ಬಟ್ಟೆಯಲ್ಲಿಯೇ ಗುರುಸಿದ್ದಪ್ಪ ತನ್ನ ಚೀಲದೊಂದಿಗೆ ವಾಸವಿದ್ದರು. ಇವರು ಎಲ್ಲಿಗೇ ಹೋದರೂ ಹಳೆಯ ಚೀಲವನ್ನು ಜತೆಯಲ್ಲೇ ಕೊಂಡೊಯ್ಯುತ್ತಿದ್ದರು. ಇದನ್ನು ಗಮನಿಸಿದ ಸ್ಥಳೀಯರಿಗೆ ವೃದ್ದನ ಮೇಲೆ ಅನುಮಾನ ಬಂದು ಚೀಲದಲ್ಲಿ ಗಾಂಜಾ ಸೊಪ್ಪು ಇರಬಹುದೇನೋ ಎಂದು ಶಂಕಿಸಿ 112ಕ್ಕೆ ದೂರವಾಣಿ ಕರೆ ಮಾಡಿದ್ದರು.
50 ಸಾವಿರಕ್ಕೂ ಅಧಿಕ ಚಿಲ್ಲರೆ ಪತ್ತೆ:ಮಾಹಿತಿ ಲಭ್ಯವಾಗುತ್ತಿದ್ದಂತೆ ಸ್ಥಳಕ್ಕೆ ಬಂದ ಎಎಸ್ಐ ಹನುಮಂತರಾಯಪ್ಪ ಮತ್ತು ಹೆಡ್ ಕಾನ್ಸ್ಟೆಬಲ್ ರಾಮಕೃಷ್ಣಯ್ಯ ವಿಚಾರಣೆ ನಡೆಸಿ ಮೂಟೆಯನ್ನು ತೆಗೆಸಿ ನೋಡಿದಾಗ 50 ಸಾವಿರಕ್ಕೂ ಅಧಿಕ ಚಿಲ್ಲರೆ ಹಣ ನೋಡಿದ್ದಾರೆ. 20 ಸಾವಿರ ರೂ.ಗೂ ಅಧಿಕ ನಾಣ್ಯ ಮತ್ತು 38 ಸಾವಿರಕ್ಕೂ ಹೆಚ್ಚು 50, 20 ಮತ್ತು 10 ರೂ. ಮುಖಬೆಲೆಯ ನೋಟುಗಳು ಸಿಕ್ಕಿವೆ. ಪೊಲೀಸರು ಹಾಗು ಸ್ಥಳೀಯರ ಸಹಾಯದಿಂದ ಹಣ ಎಣಿಕೆ ಮಾಡಿದ್ದಾರೆ.