ತುಮಕೂರು :ಕಳೆದ 6 ವರ್ಷಗಳ ಹಿಂದೆ ಬಾಲಕನೊಬ್ಬನಿಗೆ ಲೈಂಗಿಕ ಕಿರುಕುಳ ನೀಡಿದ್ದ ಮದರಸಾ ಶಿಕ್ಷಕನಿಗೆ 11 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 30 ಸಾವಿರ ರೂ. ದಂಡ ವಿಧಿಸಿ ತುಮಕೂರಿನ ಪೋಕ್ಸೋ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.
ಉತ್ತರ ಪ್ರದೇಶ ಮೂಲದ ಮಫ್ತಿ ಮುಷರಫ್ ಶಿಕ್ಷೆಗೆ ಗುರಿಯಾಗಿರುವ ಶಿಕ್ಷಕ. ತುಮಕೂರು ತಾಲೂಕಿನ ಅಮಲಾಪುರ ಗ್ರಾಮದ ಮದರಸಾದಲ್ಲಿ ಶಿಕ್ಷಕನಾಗಿದ್ದ ಈತ, 2015ರ ಏಪ್ರಿಲ್ 17ರಂದು 13 ವರ್ಷದ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ್ದ. ಈತನ ಮೇಲಿನ ಆರೋಪ ಸಾಬೀತಾದ ಕಾರಣ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಎನ್. ಕೃಷ್ಣಯ್ಯ ಶಿಕ್ಷೆ ವಿಧಿಸಿ ಆದೇಶ ಪ್ರಕಟಿಸಿದ್ದಾರೆ.
ಅಲ್ಲದೆ ಸಂತ್ರಸ್ತ ಬಾಲಕನಿಗೆ 5 ಲಕ್ಷ ರೂ. ಪರಿಹಾರ ನೀಡುವಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಆದೇಶ ನೀಡಿದ್ದಾರೆ.
ಪ್ರಕರಣದ ಹಿನ್ನೆಲೆ :
ಅಮಲಾಪುರ ಗ್ರಾಮದ ಮದರಸಾದಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ಮಫ್ತಿ ಮುಷರಕ್, 2015ರ ಏಪ್ರಿಲ್ 17ರಂದು ರೈಲ್ವೆ ಟಿಕೆಟ್ ಬುಕ್ಕಿಂಗ್ ಮಾಡಲು ಕನ್ನಡ ಭಾಷೆ ಅರ್ಥವಾಗದ ಕಾರಣ ಭಾಷಾ ಅನುವಾದದ ಸಹಾಯಕ್ಕೆಂದು ಬಾಲಕನನ್ನು ನಗರದ ರೈಲ್ವೆ ನಿಲ್ದಾಣಕ್ಕೆ ಕರೆದುಕೊಂಡು ಹೋಗಿದ್ದ. ಬಳಿಕ ತನ್ನ ಬೈಕ್ನ ಪೆಟ್ರೋಲ್ ಖಾಲಿಯಾಗಿದೆ, ಲಾಡ್ಜ್ನಲ್ಲಿ ಉಳಿಯೋಣ ಎಂದು ಬಾಲಕನನ್ನು ಬಲವಂತದಿಂದ ರೈಲ್ವೆ ನಿಲ್ದಾಣದ ಸಮೀಪದ ಲಾಡ್ಜ್ಗೆ ಕರೆದುಕೊಂಡು ಹೋಗಿದ್ದ.
ಓದಿ : ಬಾಲಕಿ ಮೇಲೆ ಪೂಜಾರಿಯಿಂದ ಅತ್ಯಾಚಾರ, ಕೊಲೆ ಆರೋಪ.. ರಾಷ್ಟ್ರ ರಾಜಧಾನಿಯಲ್ಲಿ ದುಷ್ಕೃತ್ಯ
ಅಲ್ಲಿ ಬಾಲಕನ ಮೇಲೆ ದೌರ್ಜನ್ಯ ಎಸಗಿದ್ದ. ಮರುದಿನ ಬೈಕ್ನಲ್ಲಿ ಬಾಲಕನನ್ನು ಮರಳಿ ಹಾಸ್ಟೆಲ್ಗೆ ಬಿಟ್ಟು, ಯಾರಿಗೂ ವಿಚಾರ ಹೇಳದಂತೆ ಆತನಿಗೆ ಬೆದರಿಕೆ ಹಾಕಿ ಅದೇ ದಿನ ಮಧ್ಯಾಹ್ನ ಲಾಡ್ಜ್ ಖಾಲಿ ಮಾಡಿಕೊಂಡು ಪರಾರಿಯಾಗಿದ್ದ. ಲಾಡ್ಜ್ ಪ್ರವೇಶಿಸುವಾಗ ರಿಜಿಸ್ಟ್ರಾರ್ನಲ್ಲಿ ಆರೋಪಿ ತನ್ನ ಹೆಸರು ಮತ್ತು ಹುಡುಗನ ಹೆಸರನ್ನು ಉಲ್ಲೇಖಿಸಿದ್ದ. ಖಾಲಿ ಮಾಡುವಾಗ ಆರೋಪಿಯ ಹೆಸರು ಮಾತ್ರ ಬರೆದಿರುವುದು ಕಂಡು ಬಂದಿತ್ತು.
ಈ ಘಟನೆ ನಡೆದ ನಂತರ ಬಾಲಕನನ್ನು ಆತನ ತಾಯಿ ಭೇಟಿಯಾದ ಸಮಯದಲ್ಲಿ ಲೈಂಗಿಕ ದೌರ್ಜನ್ಯ ಎಸಗಿರುವ ವಿಷಯ ಬೆಳಕಿಗೆ ಬಂದಿತ್ತು. ತಾಯಿಯ ಮುಂದೆ ಬಾಲಕ ತನ್ನ ನೋವನ್ನು ತೋಡಿಕೊಂಡಿದ್ದನು. ಅಲ್ಲದೆ, ಹಾಸ್ಟೆಲ್ನಿಂದ ತನ್ನನ್ನು ಕರೆದುಕೊಂಡು ಹೋಗುವಂತೆ ಕೇಳಿಕೊಂಡಿದ್ದ. ಈ ಬಗ್ಗೆ ಬಾಲಕನ ತಾಯಿ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ದೂರು ಸ್ವೀಕರಿಸಿದ ಪೊಲೀಸರು, ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 377(ಅಸಹಜ ಲೈಂಗಿಕತೆ) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.
ನ್ಯಾಯಾಲಯವು ವಿಚಾರಣೆ ವೇಳೆ 11 ಮಂದಿ ಪ್ರತ್ಯಕ್ಷ ದರ್ಶಿಗಳ ಸಾಕ್ಷಿಯನ್ನು ಪಡೆದಿದ್ದು, ದೌರ್ಜನ್ಯಕ್ಕೊಳಗಾದ ಬಾಲಕ ಮತ್ತು ತಾಯಿಯ ಹೇಳಿಕೆಗಳು ನಿರ್ಣಾಯಕವೆಂದು ಪರಿಗಣಿಸಿ, ಅಪರಾಧಿ ಮದರಸಾ ಶಿಕ್ಷಕನಿಗೆ ಶಿಕ್ಷೆ ನೀಡಿದೆ. ಪ್ರಕರಣದಲ್ಲಿ ಸಂತ್ರಸ್ತ ಬಾಲಕನ ಪರವಾಗಿ ಸರ್ಕಾರಿ ಅಭಿಯೋಜಕಿ ಗಾಯಿತ್ರಿ ವಾದ ಮಂಡಿಸಿದ್ದರು.