ತುಮಕೂರು: ಶಿರಾ ವಿಧಾನಸಭಾ ಉಪಚುನಾವಣೆಯಲ್ಲಿ ಪಕ್ಷಾಂತರ ಪರ್ವ ಭರ್ಜರಿಯಾಗಿ ನಡೆದಿದ್ದು ಇದುವರೆಗೂ ಜೆಡಿಎಸ್ ಪಕ್ಷದಿಂದ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಕ್ಕೆ ವಲಸೆ ಹೋಗುತ್ತಿರುವುದು ಸಾಮಾನ್ಯವಾಗಿತ್ತು. ಇದು ಜೆಡಿಎಸ್ ಪಕ್ಷದ ಮುಖಂಡರಿಗೆ ತೀವ್ರ ಇರುಸುಮುರುಸು ಉಂಟಾಗಿತ್ತು.
ಇದೀಗ ಉಪಚುನಾವಣಾ ಪ್ರಚಾರದ ಅಖಾಡಕ್ಕಿಳಿದಿರುವ ಜೆಡಿಎಸ್ ಮುಖಂಡರು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಸ್ಥಳಿಯ ಕಾರ್ಯಕರ್ತರು ಹಾಗೂ ಮುಖಂಡರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸುವ ಸಾಲುಸಾಲು ಕಾರ್ಯಕ್ರಮಗಳನ್ನು ಆಯೋಜಿಸುತಿದ್ದಾರೆ.
ಜೆಡಿಎಸ್ಗೆ ಸೇರ್ಪಡೆಗೊಂಡ ಸ್ಥಳಿಯ ಮುಖಂಡರು ಶಿರಾ ವಿಧಾನಸಭಾ ಕ್ಷೇತ್ರದ ಹುಲಿಕುಂಟೆ ಹೋಬಳಿ ಮಟ್ಟದ ಸಂಘಟನೆ ಹಾಗೂ ಪಕ್ಷ ಸೇರ್ಪಡೆ ಕಾರ್ಯಕ್ರಮವನ್ನು ಆಯೋಜಿಸಿದ್ದ ಜೆಡಿಎಸ್, ಮುಖಂಡರಾದ ಸತ್ಯಪ್ರಕಾಶ್ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯ ಕುಳ್ಳ ರಾಮಕೃಷ್ಣಪ್ಪ ನೇತೃತ್ವದಲ್ಲಿ ಕಾಂಗ್ರೆಸ್ನ ಮುಖಂಡರನ್ನು ಜೆಡಿಎಸ್ಗೆ ಸೇರ್ಪಡೆಗೊಂಡರು.
ಇನ್ನೊಂದೆಡೆ ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರು ಸಹ ಜೆಡಿಎಸ್ನ ಸ್ಥಳಿಯ ಮುಖಂಡರನ್ನು ಪಕ್ಷಕ್ಕೆ ಬರಮಾಡಿಕೊಳ್ಳುವ ಪ್ರಕ್ರಿಯೆ ಮುಂದುವರಿಸಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ತಡಕಲೂರು ಪಂಚಾಯಿತಿ ವ್ಯಾಪ್ತಿಯ ಕರಿದಾಸರಹಳ್ಳಿ, ಲಕ್ಕನಹಳ್ಳಿ, ತಡಕಲೂರು ಗ್ರಾಮದ ಸ್ಥಳಿಯ ಮುಖಂಡರನ್ನು ಕಾಂಗ್ರೆಸ್ ಅಭ್ಯರ್ಥಿ ಟಿಬಿ ಜಯಚಂದ್ರ ಸಮ್ಮುಖದಲ್ಲಿ ಬರ ಮಾಡಿಕೊಳ್ಳಲಾಗಿದೆ.
ಅದೇ ರೀತಿ ಜೆಡಿಎಸ್ ಶಿರಾ ತಾಲೂಕು ಉಪಾಧ್ಯಕ್ಷರು ಹಾಗೂ ಸಿದ್ದೇಶ್ ರಮೇಶ್ ಪುಟ್ಟರಾಜು ಸೇರಿದಂತೆ ಅನೇಕ ಸ್ಥಳಿಯ ಜೆಡಿಎಸ್ ಮುಖಂಡರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳಿಸುವಲ್ಲಿಯೂ ಯಶಸ್ವಿಯಾಗಿದ್ದಾರೆ.
ಬಿಜೆಪಿ ಸಹ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಹಾಗೂ ಎಪಿಎಂಸಿ ಮಾಜಿ ಅಧ್ಯಕ್ಷ ನರಸಿಂಹ ಗೌಡ, ಜೆಡಿಎಸ್ ತಾಲೂಕು ಪಂಚಾಯಿತಿ ಸದಸ್ಯ ಛಾಯಾದೇವಿ ನಾಗಭೂಷಣ್ ದ್ವಾರನಕುಂಟೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಾಲೇಗೌಡ ಸೇರಿದಂತೆ ವಾಜರಹಳ್ಳಿ ಗ್ರಾಮದಲ್ಲಿ ಜೆಡಿಎಸ್ ಕಾರ್ಯಕರ್ತರನ್ನು ಬಿಜೆಪಿಗೆ ಬರಮಾಡಿಕೊಳ್ಳುವಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ಗೌಡ ಹಾಗೂ ಬಿಜೆಪಿ ಮುಖಂಡರಾದ ಎಸ್ಆರ್ ಗೌಡ ಹಾಗೂ ಡಾ.ರಾಜೇಶ್ ಗೌಡ ಸಫಲರಾಗಿದ್ದಾರೆ.
ಹೀಗೆ ಮೂರು ಪಕ್ಷಗಳಲ್ಲಿ ಪಕ್ಷಾಂತರ ಪರ್ವದ ಅಭಿಯಾನವೇ ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ ಎಂದು ಹೇಳಬಹುದಾಗಿದೆ.